60 ಅಡಿ ಆಳಕ್ಕೆ ಉರುಳಿ ಬಿದ್ದ ಕಾರು: ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರು

1 (8)
Published on

ಮಂಡ್ಯ: ತಾಲೂಕಿನ ಮಾಚಹಳ್ಳಿ ಗ್ರಾಮದ ಸಮೀಪ ಸೈಕಲ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು 60 ಅಡಿ ಆಳದ ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ನೀರಿಲ್ಲದ ಪರಿಣಾಮ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಸತ್ಯಪ್ರಕಾಶ್, ಪತ್ನಿ ಪ್ರತಿಭಾ ಮತ್ತು ಇಬ್ಬರು ಮಕ್ಕಳು ಬದುಕುಳಿದವರು. ಇವರೆಲ್ಲರೂ ಕಾರಿನಲ್ಲಿ ಪಾಂಡವಪುರದಿಂದ ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಮಾಚಹಳ್ಳಿ ಸಮೀಪ ಸೈಕಲ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪಕ್ಕಕ್ಕೆ ಎಳೆದುಕೊಂಡಿದ್ದಾರೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿದೆ. ನಾಲೆಯಲ್ಲಿ ಅರ್ಧ ಅಡಿಯಷ್ಟು ನೀರಿದ್ದ ಪರಿಣಾಮ ದುರಂತ ತಪ್ಪಿದೆ. ಕೂಡಲೇ ಸ್ಥಳೀಯರು ಆಗಮಿಸಿ ಕಾರಿನೊಳಗಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಅಷ್ಟರಲ್ಲಿ ಶಿವಳ್ಳಿ ಠಾಣೆ ಎಸ್‌ಐ ರವಿಕುಮಾರ್, ಎಎಸ್‌ಐಗಳಾದ ಮಹದೇವು, ವೆಂಕಟೇಶ್, ಮುಖ್ಯಪೇದೆಗಳಾದ ಗೋವಿಂದ್, ಸತೀಶ್, ಮಂಜುನಾಥ್ ಆಗಮಿಸಿದ್ದಾರೆ.

ನಂತರ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಿದ್ದಾರೆ. ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಂತೆಯೇ ಅಪಘಾತದಲ್ಲಿ ಸಣ್ಣಪುಟ್ಟ ಗಾಯವಾಗಿದ್ದ ಹಿನ್ನೆಲೆಯಲ್ಲಿ ಶಿವಳ್ಳಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಘಟನೆ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net