

ಕುಣಿಗಲ್: ಧರ್ಮಸ್ಥಳದಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಟವೇರಾ ಕಾರಿಗೆ ಧರ್ಮಸ್ಥಳಕ್ಕೆ ಹೊರಟಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಅಪ್ಪಳಿಸಿದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ತಿಂಗಳ ಮಗು ಸೇರಿ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟವೇರಾದಲ್ಲಿದ್ದ ತಮಿಳುನಾಡಿನ ಸಿಕನಪೆಲ್ಲಿಯ ಮಂಜುನಾಥ್ (35), ತನುಜಾ (25), ಗೌರಮ್ಮ (60), ರತ್ನಮ್ಮ (52), ಸುಂದರ್ ರಾಜ್ (48)ರಾಜೇಂದ್ರ (27), ಸರಳಾ (32), ಪ್ರಶನ್ಯಾ (14), ಮೌಲಾಶ್ರೀ (4) ಹಾಗೂ ಆರು ತಿಂಗಳ ಗಂಡು ಮಗು, ಬ್ರೀಝಾ ಕಾರಿನಲ್ಲಿದ್ದ ಬೆಂಗಳೂರು ಕೆಂಗೇರಿಯ ಹುಣಸೆಮರದಪಾಳ್ಯದ ಲಕ್ಷ್ಮೀಕಾಂತ್(24), ಗೇರಪಾಳ್ಯದ ಸಂದೀಪ (36), ರಾಮೋಹಳ್ಳಿ ಮಧು (28) ಮೃತರು. ಟವೇರ ವಾಹನದಲ್ಲಿದ್ದ ಶ್ವೇತಾ (32), ಅರ್ಪಿತಾ (12), ಗಂಗೋತ್ರಿ (14) ಹಾಗೂ ಬ್ರೀಝಾ ಕಾರಿನಲ್ಲಿದ್ದ ಪ್ರಕಾಶ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ
ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪ ಅಪಘಾತದಲ್ಲಿ ಮೃತಪಟ್ಟ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬೆರಿಕೈ ಸಮೀಪದ ಸಿಕನಪೆಲ್ಲಿ ಗ್ರಾಮದ ಹತ್ತು ಮಂದಿಗೆ ಕೃಷ್ಣಗಿರಿ ಜಿಲ್ಲಾಧಿಕಾರಿ ಪ್ರಭಾಕರನ್ ಅಂತಿಮ ನಮನ ಸಲ್ಲಿಸಿದರು. ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಡಪಾಡಿ ಪಳನಿಸ್ವಾಮಿ ಘೊಷಿಸಿದ್ದಾರೆ ಎಂದು ತಿಳಿಸಿದರು.
ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಬ್ರೀಝಾ ಕಾರಿನಲ್ಲಿದ್ದ ಯುವಕರು ಮದ್ಯಪಾನ ಮಾಡಿಕೊಂಡು ಮೋಜು ಮಸ್ತಿ ಮಾಡಿಕೊಂಡು ಹೋಗುತ್ತಿದ್ದರಾ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. | ಶರತ್ ಚಂದ್ರ, ಕೇಂದ್ರ ವಲಯ ಐಜಿ. ಮಕ್ಕಳ ಮುಡಿ ತೆಗೆಸಿಕೊಂಡು ಬರುವುದಾಗಿ ದೇವಸ್ಥಾನಕ್ಕೆ ತೆರಳಿದ್ದರು. ಈಗ ಹೆಣವಾಗಿ ಬಂದಿದ್ದಾರೆ. ದೇವರಿಗೆ ಕರುಣೆಯೇ ಇಲ್ಲವೇನೋ... ಮದ್ಯಸೇವಿಸಿ ಮೋಜು ಮಾಡಿಕೊಂಡು ಬಂದ ಯುವಕರ ಹುಚ್ಚಾಟಕ್ಕೆ ನಮ್ಮ ಕುಟುಂಬ ಬಲಿಯಾಗಿದೆ. | ವೆಂಕಟಾಚಲ, ಮೃತ ಮಂಜುನಾಥ್ ಸಂಬಂಧಿ