

ನೆಲಮಂಗಲ: ಯಂಟಗಾನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕು ಸವೇನಹಳ್ಳಿ ನಿವಾಸಿ ಶಿವಕುಮಾರ್ (24), ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ನಿವಾಸಿ ಕಿರಣ್ (25), ಹೆಬ್ಬಾಳ ಬಳಿಯ ಕೆಂಪಾಪುರ ಅಗ್ರಹಾರ ನಿವಾಸಿ ಕಾವೇರಮ್ಮ (80) ಮೃತಪಟ್ಟಿದ್ದಾರೆ. ಕಾವೇರಮ್ಮ ಸೊಸೆ ರಶ್ಮಿ (51) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಿರಿಸಾವೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಬೆಳಗ್ಗೆ 8 ಗಂಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಾರುತಿ ಇಕೋ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಸೈರ್ ಕಾರಿನಲ್ಲಿದ್ದ ಶಿವಕುಮಾರ್, ಕಿರಣ್ ಹಾಗೂ ಇಕೋ ಕಾರಿನಲ್ಲಿದ್ದ ಕಾವೇರಮ್ಮ ಸ್ಥಳದಲ್ಲೇ ಮೃತಪಟ್ಟರೆ, ರಶ್ಮಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ರಶ್ಮಿ ಪತಿ ರಾಮಕೃಷ್ಣ (56), ಪುತ್ರಿ ನಿಶಾ (21) ರಾಮಕೃಷ್ಣ ಸ್ನೇಹಿತ ನಾಗರಾಜು (45) ಹಾಗೂ ಸ್ವಿಫ್ಟ್ ಕಾರು ಚಾಲಕ ಸಚಿನ್ (25) ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಾಹಕ್ಕೆ ತೆರಳುತ್ತಿದ್ದ ಕುಟುಂಬ: ರಾಮಕೃಷ್ಣ, ತಾಯಿ ಕಾವೇರಮ್ಮ, ಪತ್ನಿ ರಶ್ಮಿ, ಪುತ್ರಿ ನಿಶಾ ಸ್ನೇಹಿತ ನಾಗರಾಜು ಕೊಡಗಿನಲ್ಲಿ ಸಂಬಂಧಿಕರ ವಿವಾಹಕ್ಕೆ ತೆರಳುತ್ತಿದ್ದರು. ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ಶಿವಕುಮಾರ್ ಹಾಗೂ ಕಿರಣ್ ಬೆಂಗಳೂರಿನ ಕೆ.ಆರ್. ಪುರ ಮೂಲದವರಾಗಿದ್ದು, ಹಿರಿಸಾವೆಯಿಂದ ಬೆಂಗಳೂರಿನ ಕಡೆಗೆ ಹೊರಟಿದ್ದರು.