

ಗಂಗೊಳ್ಳಿ: ಹೆಮ್ಮಾಡಿ ಗ್ರಾಮದ ಜಾಲಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಗೆ ಅಡ್ಡ ಬಂದ ಬೀದಿ ನಾಯಿ ಕಂಡು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಕಾರು ಮಗುಚಿ ಬಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಕಾರನ್ನು ಚಾಲಕ ಅತಿ ವೇಗವಾಗಿ ಚಲಾಯಿಸುತ್ತಿದ್ದು, ರಸ್ತೆಗೆ ಅಡ್ಡ ಬಂದ ನಾಯಿಯನ್ನು ಕಂಡು ಒಮ್ಮೆಲೆ ಬ್ರೇಕ್ ಹಾಕಿದ್ದಾರೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲಕ್ಕೆ ಚಲಿಸಿ ಡಿವೈಡರ್ ದಾಟಿ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ಬೈಂದೂರು ಏಕಮುಖ ರಸ್ತೆ ಮೇಲೆ ಮಗುಚಿ ಬಿದ್ದಿದೆ. ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಸಂತೋಷ ಆಚಾರ್ಯ(38), ಗುರುಪ್ರಸಾದ್(20) ಹಾಗೂ ಹರೀಶ್ ಹಾಗೂ ಇನ್ನೋರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ. ಸಂತೋಷ ಆಚಾರ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.