

ತುಮಕೂರು : ಕರೊನಾ ಸೋಂಕು ಹತೋಟಿಗೆ ಬರಲಾಗದೆ ಕಂಗಾಲಾಗಿರುವ ಜಿಲ್ಲೆಯ 7 ಕರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರೊನಾ ಸೋಂಕಿನಿಂದ ಬಳಲಿದವರಲ್ಲಿ ಈ ಮಾರಣಾಂತಿಕ ಶಿಲೀಂಧ್ರಗಳು ಬೇಗನೆ ದಾಳಿ ಮಾಡುತ್ತವೆ, ಜತೆಗೆ ಅಷ್ಟೇ ವೇಗವಾಗಿ ಉಲ್ಭಣವಾಗುವುದರಿಂದ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಹಾಗಾಗಿ, ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ಅಗತ್ಯ ಏರ್ಪಾಟು ಮಾಡಿಕೊಳ್ಳಬೇಕು ಎಂಬ ಒತ್ತಾಯವಿದೆ.
ಕರೊನಾದಿಂದ ಗುಣಮುಖರಾದವರನ್ನು ಕಾಡುತ್ತಿರುವ ಈ ಬ್ಲ್ಯಾಕ್ ಫಂಗಸ್ ಕರೊನಾ ಸೋಂಕು ಮಾಡುವ ಹಾನಿಗಿಂತಲೂ ಹೆಚ್ಚು ಅಪಾಯಕಾರಿ. ರೋಗ ಕಾಣಿಸಿಕೊಂಡ ಕೂಡಲೇ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವ ಅಗತ್ಯವಿದ್ದು ಶಸಚಿಕಿತ್ಸೆ ಕೂಡ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡರೆ ಸಾವಿನ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಿದೆ. ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆಗೆ ಆಂಪೋಟೆರಿಸಿನ್ ಬಿ ಇಂಜಕ್ಷನ್ ನೀಡಲಾಗುತ್ತಿದೆ, ಕೋವಿಡ್ ಚಿಕಿತ್ಸೆ ಕಡೆಯೇ ಹೆಚ್ಚು ಗಮನವಿದ್ದ ಸಂದರ್ಭದಲ್ಲಿ ಏಕಾಏಕಿ ಬ್ಲ್ಯಾಕ್ ಫಂಗಸ್ ಕಾಟ ಕೂಡ ಶುರುವಾಗಿದ್ದು ಈ ಔಷಧದ ಕೊರತೆ ಕೂಡ ಇದೆ.
ರೋಗ ಲಕ್ಷಣಗಳು: ಕಣ್ಣು ಕೆಂಪಾಗುವುದು, ಕಣ್ಣಲ್ಲಿ ಊತ, ಮೂಗು ಕೆಂಪಾಗುವುದು ಮತ್ತು ಊತ ಕಾಣಿಸಿಕೊಳ್ಳುವುದು ಬ್ಲ್ಯಾಕ್ ಫಂಗಸ್ ಲಕ್ಷಣವಾಗಿದೆ, ಕರೊನಾದಿಂದ ಗುಣವಾದ ನಂತರವೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಬ್ಲ್ಯಾಕ್ ಫಂಗಸ್ ತಗುಲಿರುವ ಸಾಧ್ಯತೆಯಿರುತ್ತದೆ. ಮೂಗು, ಕಣ್ಣು, ಮಿದುಳು, ಶ್ವಾಸಕೋಶ ಹೀಗೆ ದೇಹದ ನಾನಾ ಭಾಗಗಳಿಗೆ ಫಂಗಸ್ ದಾಳಿ ಮಾಡಿ ಸಾವು ತರುವ ಸಾಧ್ಯತೆಯಿದೆ.
ಪ್ರಸ್ತುತ ಜಿಲ್ಲೆಯಲ್ಲಿ 7 ಕರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತೆಯಿಂದ ಅಗತ್ಯ ಔಷಧದ ವ್ಯವಸ್ಥೆ ಮಾಡಿಕೊಳ್ಳಲಾಗುವುದು, ರೋಗ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ಡಾ.ನಾಗೇಂದ್ರಪ್ಪ ಡಿಎಚ್‌ಒ, ತುಮಕೂರು