ಕ್ಯಾಮರಾದಲ್ಲಿ ಚಿರತೆಯ ಚಲನವಲನ ಸೆರೆ!

04Tmk_Chirate_Trap_camera_03
Published on

ತುಮಕೂರು: ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳು ಹೊಂದಿಕೊಂಡಿರುವ ಟ್ರೈ ಜಂಕ್ಷನ್‌ನ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ನರಭಕ್ಷಕ ಚಿರತೆಗಳ ಚಲನವಲನಗಳ ದೃಶ್ಯಾವಳಿಗಳು ಟ್ರಾೃಪ್ ಕ್ಯಾಮರಾದಲ್ಲಿ ಸೆರೆಯಾಗಿವೆ.

3 ತಾಲೂಕುಗಳು ಕೂಡುವ ಭಾಗದ 8-10 ಕಿ.ಮೀ., ಪ್ರದೇಶ ವ್ಯಾಪ್ತಿಯಲ್ಲಿ 4 ಚಿರತೆಗಳಿದ್ದು, 2 ನರಭಕ್ಷಕ ಚಿರತೆಗಳಿರಬಹುದು ಎಂದು ಗುರುತಿಸಲಾಗಿದೆ. ಒಂದು ಗಂಡು, ಒಂದು ಹೆಣ್ಣು ಚಿರತೆ ಬನ್ನಿಕುಪ್ಪೆ ಸುತ್ತಮುತ್ತಲಿನ ಪ್ರದೇಶದಲ್ಲೇ ಓಡಾಡುತ್ತಿದ್ದು, ಈ ಭಾಗದಲ್ಲಿ 18 ಟ್ರಾೃಪ್‌ಗಳನ್ನು ಅಳವಡಿಸಲಾಗಿದೆ. ಉಳಿದ ಕಡೆ 4 ಕ್ಯಾಮರಾಗಳನ್ನು ಇಡಲಾಗಿದೆ. ಬೈಚೇನಹಳ್ಳಿ ಮಗು ಹತ್ಯೆ ಪ್ರಕರಣದ ಬಳಿಕ ಈ ಕ್ಯಾಮರಾಗಳಲ್ಲಿ ಚಿರತೆ ಚಲನವಲನಗಳು ಸೆರೆಯಾಗಿವೆ.

ಬೋನಿನ ಬಳಿ ಸುಳಿಯುವ ಚಿರತೆ: ನರಭಕ್ಷಕ ಚಿರತೆಗಳು ಬೋನಿನ ಬಳಿ ಸುಳಿಯುತ್ತಾವಾದರೂ ಬೋನಿನೊಳಗೆ ಕಟ್ಟಿರುವ ಕುರಿ, ಮೇಕೆ ತಿನ್ನಲು ಒಳಗೆ ಹೋಗುತ್ತಿಲ್ಲ. ಇದನ್ನು ಗಮನಿಸಿ ಬೋನಿನ ಹೊರಗಡೆ ಕೂಡ ಸಾಕು ಪ್ರಾಣಿಗಳನ್ನು ಕಟ್ಟಲಾಯಿತಾದರೂ ಚಿರತೆ ಅವುಗಳ ತಂಟೆಗೆ ಬಂದಿಲ್ಲ ಎಂದು ಆರ್‌ಎಫ್‌ಒ ಎಲ್.ಎಚ್.ನಟರಾಜು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇವೆಲ್ಲವೂ ಟ್ರಾೃಪ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಾಗಾಗಿ, ಚಿರತೆ ಚಲನವಲನದ ಜಾಡು ಹಿಡಿದು ಅವುಗಳನ್ನು ಸೆರೆಹಿಡಿಯುವುದು ಸವಾಲಾಗಿದೆ. ಚಿರತೆಗಳನ್ನು ಸೆರೆಹಿಡಿಯಲು 4 ತಿಂಗಳು ಒಂದು ಕಡೆ ಕ್ಯಾಂಪ್ ಮಾಡಿರುವುದು ರಾಜ್ಯದಲ್ಲೇ ಇದು ಮೊದಲು. ಸೋಲಿಗರನ್ನು ಸಹ ಕರೆಸಲಾಗಿತ್ತು. ಜತೆಗೆ ವಿಶೇಷ ಹುಲಿ ಟಾಸ್ಕ್ ಫೋರ್ಸ್ ಸಿಬ್ಬಂದಿ ಕೂಡ ಕೆಲದಿನ ಬಂದು ಪ್ರಯತ್ನಿಸಿದರು. ಆದರೂ ಕೂಡ ಚಿರತೆಗಳನ್ನು ಸೆರೆಹಿಡಿಯುವುದು ಕಷ್ಟಸಾಧ್ಯವೆನಿಸಿದೆ. ಸರ್ಕಾರದಿಂದ ಕಂಡಲ್ಲಿಗುಂಡಿಕ್ಕುವ ಆದೇಶಕ್ಕಾಗಿ ಕಾಯುತ್ತಿರುವೆವು ಆ ನಂತರ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಚಿರತೆ ಸುಳಿವು ಸಿಕ್ಕರೆ ತಹಸೀಲ್ದಾರ್ ಕಚೇರಿ ದೂ.ಸಂ.0816-2278496, ಪೊಲೀಸ್ ಠಾಣೆ ದೂ.ಸಂ.8217372763, ಅರಣ್ಯ ಇಲಾಖೆಯ ಕಂಟ್ರೋಲ್ ರೂಂ ಮೊ: 7829689854/ 9845801411 /9980859719/ 9611202826ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಹಸೀಲ್ದಾರ್ ಟಿ.ವಿ.ಮೋಹನ್ ಕುಮಾರ್ ಮನವಿ ಮಾಡಿದರು. ತಾಪಂ ಇಒ ಡಿ.ಜಯಪಾಲ್, ಆರ್‌ಡಿಪಿಆರ್ ಎಒ ಶಿವಣ್ಣ ಮತ್ತಿತರರು ಹಾಜರಿದ್ದರು.

ರೈತರು ತಮ್ಮ ಜಮೀನನಲ್ಲಿ ಪೊದೆ ಬೆಳೆಸಿ ಚಿರತೆಗಳಿಗೆ ಅವಾಸ ಸ್ಥಾನ ಮಾಡಿಕೊಡದೆ ಕೂಡಲೇ ತೆರವುಗೊಳಿಸಬೇಕು. ಒಂದು ವೇಳೆ ತರವುಗೊಳಿಸದೇ ಇದ್ದಲ್ಲಿ ಜಮೀನಿಗೆ ಸಂಬಂಧಿಸಿದ ಪಹಣಿ ಕಲಂ 11(ಋಣ)ರಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಎಂದು ದಾಖಲಿಸಲಾಗುವುದು. ಸರ್ಕಾರಿ ಜಮೀನುಗಳಲ್ಲಿ ಈಗಾಗಲೇ ಪೊದೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಚಿಕ್ಕಣ್ಣ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಪೊದೆ ತೆರವುಗೊಳಿಸಲಾಗಿದೆ. ಟಿ.ವಿ.ಮೋಹನ್‌ಕುಮಾರ್ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net