ಇಬ್ಬರನ್ನು ಹತ್ಯೆ ಮಾಡಿದ್ದ ಆರೋಪಿಗಳ ಸೆರೆ

SRP_20-04jpg (1)
Published on

ಶ್ರೀರಂಗಪಟ್ಟಣ: ಮಹಿಳೆಯೊಬ್ಬಳ ಮೇಲೆ ವಿಕೃತವಾಗಿ ಅತ್ಯಾಚಾರ ಮಾಡಿ ದಿಂಡುಗಲ್ಲಿನಿಂದ ಜಜ್ಜಿ ಹತ್ಯೆ ಹಾಗೂ ಮತ್ತೊಂದು ಪ್ರಕರಣದಲ್ಲಿ ಯುವಕನನ್ನು ಸಿಮೆಂಟ್ ಇಟ್ಟಿಗೆಯಿಂದ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ನರಗ್ಯಾತನಹಳ್ಳಿಯ ಶಿವು ಅಲಿಯಾಸ್ ಶಿವಕುಮಾರ (26), ಪಾಲಹಳ್ಳಿ ಗ್ರಾಮದ ಗಾಂಧಿನಗರ ನಿವಾಸಿ ರಾಜೇಶ್ ಅಲಿಯಾಸ್ ಕೊರಮ(32) ಬಂಧಿತರು.

ಮಾ.3ರಂದು ಶ್ರೀರಂಗಪಟ್ಟಣದ ಬೆಂ-ಮೈಸೂರು ಹೆದ್ದಾರಿ ಬಳಿಯ ನಿರ್ಜನ ಪ್ರದೇಶದ ಕೋಟೆ ಕಂದಕದಲ್ಲಿ 30-35 ವರ್ಷದ ಮಹಿಳೆ ಮೇಲೆ ವಿಕೃತವಾಗಿ ಅತ್ಯಾಚಾರ ಮಾಡಿ ಬಳಿಕ ತಲೆ ಮೇಲೆ ಕಲ್ಲು ಎತ್ತುಹಾಕಿ ಕೊಲೆಗೈದಿದ್ದರು. ಮೃತಳ ಮುಖದ ಗುರುತು ಸಿಗದಂತೆ ಮುಖವನ್ನು ಕಲ್ಲಿನಿಂದ ಜಜ್ಜಿ ಹಾಕಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಹತ್ಯೆಯಾದವಳು ಹುಣಸೂರು ಮೂಲದ ಮೀನಾ ಎಂಬುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಇದಕ್ಕೂ ಮೊದಲು ಹಳೆ ದ್ವೇಷದ ಹಿನ್ನೆಲೆ ತಮ್ಮ ಸ್ನೇಹಿತ ಹರೀಶ್ ಎಂಬಾತನನ್ನು ಬೆಳಗೊಳ ಮಾಂಟ್‌ಪೋರ್ಟ್ ಶಾಲೆಯ ಬಳಿ ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಚಿಂದಿ ಆಯುವ ಇವರು ಮಾದಕ ವ್ಯಸನಿಗಳಾಗಿದ್ದು ಅಮಲಿನಲ್ಲಿ ಹುಣಸೂರು ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಡಿವೈಎಸ್‌ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಸಿಪಿಐ ಡಿ.ಯೋಗೇಶ್ ನೇತೃತ್ವದಲ್ಲಿ ಪಿಎಸ್‌ಐ ಮುದ್ದುಮಾದೇವ, ವಿಜಯ್ ಕುಮಾರ್, ಅರುಣ್‌ಕುಮಾರ್, ನಾಗರಾಜು ಒಳಗೊಂಡ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net