ರಾಜ್ಯವನ್ನು ದಿವಾಳಿಯಾಗಿಸಿದ್ದೇ ಕಾಂಗ್ರೆಸ್ ಸಾಧನೆ

 ಸಂಸದರು ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಕ್ಯಾ. ಬ್ರಿಜೇಶ್ ಚೌಟ
ಸಂಸದರು ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಕ್ಯಾ. ಬ್ರಿಜೇಶ್ ಚೌಟ
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ಆರೋಪ
  • ಹೈನುಗಾರರಿಗೆ ನೀಡಬೇಕಾಗಿದ್ದ ಸಬ್ಸಿಡಿ ಹಣ 800 ಕೋಟಿ ರೂ. ಬಾಕಿ
  • ಮಂಜೂರಾದ 6.38 ಲಕ್ಷ ಮನೆಗಳಲ್ಲಿ 3.86 ಲಕ್ಷ ಮನೆಗಳು ಮಾತ್ರ ಪೂರ್ಣ

ಮಂಗಳೂರು: ಅಭಿವೃದ್ಧಿ ಹೊಂದುತ್ತಿದ್ದ ರಾಜ್ಯವನ್ನು ಮೂರು ವರ್ಷಗಳಲ್ಲಿ ದಿವಾಳಿಯಾಗಿಸಿದ್ದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಸಂಸದರು ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಕ್ಯಾ. ಬ್ರಿಜೇಶ್ ಚೌಟ ಅವರು ಹೇಳಿದರು.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ತಪ್ಪು ಆರ್ಥಿಕ ನಿರ್ವಹಣೆಯಿಂದಾಗಿ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಹಣಕಾಸಿನ ಶಿಸ್ತು ಇತ್ತು. ಇಂದಿನ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಆರ್ಥಿಕ ಕೊರತೆಯನ್ನು ಎದುರಿಸುತ್ತಿದೆ. ಈ ಅಂಶ ಮಹಾಲೇಖಪಾಲರ (CAG) ವರದಿಗಳಲ್ಲೇ ಉಲ್ಲೇಖವಾಗಿದೆ ಎಂದರು.

ಯಾವ ಸಾಧನೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಾಧನಾ ಸಮಾವೇಶ ಎಂದು ಪ್ರಶ್ನಿಸಿರುವ ಅವರು, ಆರ್ಥಿಕ ಶಿಸ್ತು ಕಾಪಾಡದೆ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ರಾಜ್ಯವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ರೀತಿಯಲ್ಲಿ ಬಳಸಿಕೊಂಡು ಜನರನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದರು.

ಕೇಂದ್ರದ ಯೋಜನೆಯಲ್ಲಿ ಅಸಡ್ಡೆ

ಕೇಂದ್ರ ಸರ್ಕಾರದ ಯೋಜನೆ ಜಾರಿಯಲ್ಲಿ ಅಸಡ್ಡೆ, ನಿರ್ಲಕ್ಷ್ಯ ವಹಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಮಂಜೂರಾದ 6.38 ಲಕ್ಷ ಮನೆಗಳಲ್ಲಿ 3.86 ಲಕ್ಷ ಮನೆಗಳು ಮಾತ್ರ ಪೂರ್ಣಗೊಂಡಿವೆ. ಕ್ಷೀರಧಾರೆ ಯೋಜನೆಯಡಿ ಹೈನುಗಾರರಿಗೆ ನೀಡಬೇಕಾಗಿದ್ದ ಸಬ್ಸಿಡಿ ಹಣ 800 ಕೋಟಿ ರೂ. ಬಾಕಿ ಇರಿಸಲಾಗಿದೆ. ತಿಂಗಳಿಗೆ 110 ಕೋಟಿ ರೂ. ರಾಜ್ಯ ಸರ್ಕಾರ ಇದಕ್ಕಾಗಿಯೇ ಹಣ ತೆಗೆದಿಡಬೇಕು. ಆದರೆ 9 ತಿಂಗಳಿಂದ ನಯಾಪೈಸೆ ಬಿಡುಗಡೆ ಮಾಡಿಲ್ಲ. 15 ಸಾವಿರ ಕೋಟಿ ಕಾರ್ಪಸ್ ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ದಲಿತ ನಾಯಕರೆನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರ ಸಾಧನೆ ಅವರ ಕ್ಷೇತ್ರದ ಪ್ರಗತಿಯಿಂದಲೇ ನಾವು ತಿಳಿಯಬಹುದು ಎಂದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಾಗತಿಕವಾಗಿ ತಲೆದೋರಿರುವ ಸಮಸ್ಯೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜ್ಞಾವಂತ ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಸಂಸದರು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಸುಜಿತ್ ಪ್ರತಾಪ್, ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ರಾವ್, ಕೋಶಾಧಿಕಾರಿ ಸಂಜಯ್ ಪ್ರಭು, ವಕ್ತಾರರಾದ ರಾಜಗೋಪಾಲ ರೈ, ಜೀವನ್, ಅರುಣ್ ಶೇಟ್, ದೊಂಬಯ್ಯ, ಮಾಧ್ಯಮ ವಕ್ತಾರ ಹೇಮಂತ್ ಶೇಟ್, ಕದ್ರಿ ಮನೋಹರ್ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net