ಯುವಜನರಿಗೆ ರೋಲ್ ಮಾಡೆಲ್ ಆಗಿದ್ದ ಪ್ರಾಂಜಲ್; ಮಿಲಿಟರಿ ಕಾರ್ಯಾಚರಣೆ ವೇಳೆ ಹುತಾತ್ಮ ಯೋಧನ ನೆನೆದು ಭಾವುಕರಾದ ಶಿಕ್ಷಕರು

mng- nov 23- Pranjal- 4
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪ್ರಾಂಜಲ್ ಬಗ್ಗೆ ಬೆಟ್ಟದಷ್ಟು ನೆನಪುಗಳಿವೆ. ಅವನ ಬಗ್ಗೆ ಏನು ಮಾತನಾಡುವುದೆಂದೇ ಗೊತ್ತಾಗುತ್ತಿಲ್ಲ. ಒಟ್ಟಾರೆಯಾಗಿ ವಿದ್ಯಾರ್ಥಿಗಳು, ಯುವಜನರು ಹೇಗೆ ಇರಬೇಕು ಎಂಬುದಕ್ಕೆ ಅವನು ರೋಲ್ ಮಾಡೆಲ್ (ಮಾದರಿ) ಆಗಿದ್ದ…
ಇದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಬುಧವಾರ ಉಗ್ರರ ವಿರುದ್ಧ್ದ ಹೋರಾಟದ ಸಂದರ್ಭ ಎದುರಾಳಿಗಳ ಗುಂಡಿನ ದಾಳಿಗೆ ಹುತಾತ್ಮರಾದ ಕರ್ನಾಟಕದ ಯೋಧ ಕ್ಯಾ.ಪ್ರಾಂಜಲ್ 10ನೇ ತರಗತಿ ತನಕ ವ್ಯಾಸಂಗ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನ ಎಂಆರ್‌ಪಿಎಲ್‌ನಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ವೈಸ್ ಪ್ರಿನ್ಸಿಪಾಲ್ ಕೃಪಾ ಅವರ ಮನದ ಮಾತು.
2010ರಲ್ಲಿ ಪ್ರಾಂಜಲ್ ನಮ್ಮಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ. ಸುಮಾರು ಆರು ಅಡಿಗಿಂತಲೂ ಎತ್ತರಕ್ಕಿದ್ದ ಅವನ ವ್ಯಕ್ತಿತ್ವ ಅದಕ್ಕಿಂತಲೂ ಎತ್ತರದಲ್ಲಿತ್ತು. ಮಗುವಿನಂಥ ಮನಸ್ಸು. ಯಾರನ್ನೂ ನೋಯಿಸಿ ಅವನಿಗೆ ಗೊತ್ತಿಲ್ಲ. ಪ್ರಾಯ ಮೀರಿದ ಪಕ್ವತೆ, ಸದಾ ಹರ್ಷಚಿತ್ತದಿಂದ ಇತರರಿಗೆ ಸ್ಫೂರ್ತಿದಾಯಕವಾಗಿರುತ್ತಿದ್ದ. ಎಲ್ಲ ಶಿಕ್ಷಕರಿಗೂ ಅವನು ಓರ್ವ ‘ಛ್ಟ್ಛಿಛ್ಚಿಠಿ ಠ್ಠಿಛ್ಞಿಠಿ’ ಆಗಿದ್ದ ಎನ್ನುತ್ತ ಭಾವುಕರಾದರು.
ನಾನು ಅವನಿಗೆ ಜೀವವಿಜ್ಞಾನ ಕಲಿಸುತ್ತಿದ್ದೆ. ಚಿಕ್ಕಂದಿನಲ್ಲಿ ಒಳ್ಳೆಯ ಕಬ್ ಆಗಿದ್ದ. ಸ್ಕೌಟ್ಸ್‌ನಲ್ಲಿ ರಾಷ್ಟ್ರಪತಿಯಿಂದ ಗೌರವ ಸ್ವೀಕರಿಸಿದ್ದಾನೆ. ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪ್ರದರ್ಶನಕ್ಕೆ ಅರ್ಹತೆ ಪಡೆದಿದ್ದ. ಯಾವುದೇ ವಿಷಯವಾದರೂ ಆಳ ಅಧ್ಯಯನ ಮಾಡುತ್ತಿದ್ದ. ಫಲಿತಾಂಶ ಸಿಗುವ ತನಕ ವಿರಮಿಸುತ್ತಿರಲಿಲ್ಲ. ಎಸ್ಸೆಸ್ಸೆಲ್ಸಿ ಮುಗಿಸಿದ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಬಳಿಕವೂ ಅವನು ಊರಿಗೆ ಬಂದಾಗ ಭೇಟಿ ನೀಡುತ್ತಿದ್ದ. ಹೊಸ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಿದ್ದ. ಎಲ್ಲ ಬೋಧಕ ವರ್ಗದಿಂದ ಸಾಮಾನ್ಯ ನೌಕರರ ತನಕ ಎಲ್ಲರ ಜತೆ ಪ್ರೀತಿಯಿಂದ ಬೆರೆಯುತ್ತಿದ್ದ. ಅವನು ಇವತ್ತು ಭೌತಿಕವಾಗಿ ನಮ್ಮ ಜತೆಗಿಲ್ಲ ಎಂದರೆ ನಂಬುವುದು ಕಷ್ಟ. 2023ರ, ನವೆಂಬರ್ 22 ನಮಗೆಲ್ಲರಿಗೂ ಅತ್ಯಂತ ಕೆಟ್ಟ ದಿನ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾನೆ ಎನ್ನುವುದಷ್ಟೇ ಸಮಾಧಾನ ಎಂದು ಕೃಪಾ ತಮ್ಮ ಪ್ರೀತಿಯ ವಿದ್ಯಾರ್ಥಿಯ ಬಗ್ಗೆ ಅಭಿಮಾನದಿಂದ ಅಭಿಪ್ರಾಯ ಹಂಚಿಕೊಂಡರು.

ಶಾಲೆಗೆ ರಜೆ
ಪ್ರಾಂಜಲ್ ಅಗಲುವಿಕೆಯ ಗೌರವಾರ್ಥ ಎಂಆರ್‌ಪಿಎಲ್ ಡೆಲ್ಲಿ ಸ್ಕೂಲ್‌ಗೆ ಗುರುವಾರ ರಜೆ ಪ್ರಕಟಿಸಲಾಗಿತ್ತು. ಶಾಲೆಯಲ್ಲಿ ನಡೆಯಬೇಕಾಗಿದ್ದ ಕ್ರೀಡಾ ದಿನಾಚರಣೆಯನ್ನೂ ಮುಂದೂಡಲಾಗಿದೆ.

((( ಏಕೈಕ ಪುತ್ರ
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಹಾಗೂ ಅನುರಾಧಾ ದಂಪತಿಯ ಏಕೈಕ ಪುತ್ರ ಪ್ರಾಂಜಲ್. ಪ್ರಸ್ತುತ ಇವರ ಕುಟುಂಬ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ವಾಸ್ತವ್ಯವಿದೆ. ಪ್ರಾಂಜಲ್‌ಗೆ ಎರಡು ವರ್ಷದ ಹಿಂದೆ ಮದುವೆಯಾಗಿದ್ದು ಅವರ ಪತ್ನಿ ಅದಿತಿ ಚೆನ್ನೈನ ಐಐಟಿಯಲ್ಲಿ ಸ್ನಾತಕೋತ್ತರ ಪಿಎಚ್.ಡಿ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net