ನಕ್ಸಲರು, ಸಮಾಜಘಾತುಕ ಶಕ್ತಿಗಳು ಗರಿಗೆದರಲು ಸಿದ್ದರಾಮಯ್ಯ ಸರಕಾರದ ನೀತಿಯೇ ಕಾರಣ -ಕ್ಯಾ. ಬ್ರಿಜೇಶ್ ಚೌಟ

IMG-20240408-WA0344
Published on


ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ನಕ್ಸಲರು, ಸಮಾಜ ಘಾತುಕ ಶಕ್ತಿಗಳ ಚಟುವಟಿಕೆಗಳು ಗರಿಗೆದರಿದ್ದು, ಚುನಾವಣೆ ಘೋಷಣೆಯಾದ ಬಳಿಕ ಇನ್ನಷ್ಟು ಚುರುಕಾಗಿವೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕೃಪಾಪೋಷಣೆಯೇ ಇದಕ್ಕೆಲ್ಲ ಕಾರಣ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂದಾಗನಿಂದಲೇ ಸಮಾಜದ್ರೋಹಿ ಶಕ್ತಿಗಳು ಗರಿಗೆದರಿಕೊಂಡಿವೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಹನುಮಾನ್ ಚಾಲೀಸಾ ಹಾಕಿದ ಅಂಗಡಿ ಮಾಲೀಕನ ಮೇಲೆ ಮುಸ್ಲಿಂ ಪುಂಡರ ದಾಳಿ, ಹಿಂದೂ ಯುವಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಗಡೀಪಾರು ಮಾಡುವುದು- ಇಂತಹ ಕೃತ್ಯಗಳು ಹೆಚ್ಚಾಗಿವೆ ಎಂದು ಕ್ಯಾಪ್ಟನ್ ಚೌಟ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕ್ಯಾಪ್ಟನ್ ಚೌಟ, ಸಿದ್ದರಾಮಯ್ಯ ಸರಕಾರ ಅನುಸರಿಸುತ್ತಿರುವ ತುಷ್ಟೀಕರಣ ನೀತಿ,ಅರ್ಬನ್ ನಕ್ಸಲರಿಗೆ ಸರಕಾರ ನೀಡುತ್ತಿರುವ ಪರೋಕ್ಷ ಕುಮ್ಮಕ್ಕುಗಳಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ. ಬಿಜೆಪಿ ಸಮಾಜದ್ರೋಹಿ ಕೃತ್ಯಗಳನ್ನು ಮಟ್ಟಹಾಕದೇ ಬಿಡುವುದಿಲ್ಲ ಎಂದು ಕ್ಯಾಪ್ಟನ್ ಚೌಟ ಎಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ನಕ್ಸಲರ ಗನ್‌ ಹಿಡಿದುಕೊಂಡು ಕಡಬ ಸಮೀಪ ಶಿವರಾಮ ಎಂಬವರ ಮನೆಗೆ ದಾಳಿಯಿಟ್ಟು, ಊಟ ಮಾಡಿದ್ದಲ್ಲದೆ, ಪಡಿತರವನ್ನೂ ಕೇಳಿ ಕೊಂಡೊಯ್ದಿರುವುದು ಬೆಳಕಿಗೆ ಬಂದಿದೆ. ಬಿಳಿನೆಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ಹಾದುಹೋಗುವ
ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯ ಬಳಿ ಚೇರಾ ಎಂಬಲ್ಲಿಗೆ ನಕ್ಸಲರ ಗುಂಪು ಭೇಟಿ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಮನೆಯ ಮಾಲೀಕರಾದ ಶಿವರಾಮ-ಯಮುನಾ ದಂಪತಿಗಳ ಪುತ್ರ ಅಸ್ಸಾಂನಲ್ಲಿ ಗಡಿ ಕಾಯುವ ಯೋಧನಾಗಿ ಸೇವೆ
ಸಲ್ಲಿಸುತ್ತಿದ್ದಾರೆ. ಯೋಧನ ಮನೆಗೇ ದಾಳಿಯಿಡುವ ಧೈರ್ಯವನ್ನು ನಕ್ಸಲರು ತೋರಿರುವುದು ಸಿದ್ದರಾಮಯ್ಯ ಸರಕಾರದ ಕೃಪೆ ದುಷ್ಟಶಕ್ತಿಗಳ ಮೇಲೆ ಇರುವುದನ್ನು ತೋರಿಸುತ್ತದೆ ಎಂದು ಕ್ಯಾಪ್ಟನ್ ಚೌಟ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net