ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಲು ಗೃಹ ಸಚಿವರಿಗೆ ಮನವಿ

mng-31july-amith sha
Published on


ಮಂಗಳೂರು : ಹಿಂದೂ ಕಾರ್ಯಕರ್ತರ ಹತ್ಯೆ, ಡ್ರಗ್ಸ್ ಮಾಫಿಯಾ, ಭಟ್ಕಳ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್‌ಗಳ ಆತಂಕದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಶೀಘ್ರ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಕಚೇರಿ
ಸ್ಥಾಪಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ
ಸಲ್ಲಿಸಿದ್ದಾರೆ.
ಗುರುವಾರ ದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂಸದರು ದ.ಕ.ಜಿಲ್ಲೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಬಂಧನಗಳು ಮತ್ತು ಚಟುವಟಿಕೆಗಳು ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖ ಸದಸ್ಯರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಎನ್‌ಐಎ ತನಿಖಾಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ ಎಂದು ಗೃಹ ಸಚಿವರಿಗೆ ಮನವರಿಕೆ ಮಾಡಿದರು.
ಕರಾವಳಿಯಲ್ಲಿ ಡ್ರಗ್ ಮಾಫಿಯಾವನ್ನು ನಿರ್ಮೂನೆಗೊಳಿಸಬೇಕಾಗಿದೆ. ಜಿಲ್ಲೆಯಲ್ಲಿ 375ಕ್ಕೂ ಹೆಚ್ಚು ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 67ಕ್ಕೂ ಹೆಚ್ಚು ವ್ಯಕ್ತಿಗಳು ಬಂಧನವಾಗಿರುವ ಬಗ್ಗೆ ಅಂಕಿ-ಅಂಶಗಳಿವೆ. ಡ್ರಗ್ಸ್ ಚಟುವಟಿಕೆಗಳು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದು ರಾಷ್ಟ್ರೀಯ ಭದ್ರತೆಗೂ ಗಂಭೀರ ಬೆದರಿಕೆಯಾಗುತ್ತಿದೆ ಎಂದು ಸಂಸದರು ಗೃಹ ಸಚಿವರಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಎನ್‌ಐಎ ತನಿಖೆಗೆ ವಹಿಸಿದೆ. ಪ್ರಕರಣದ ಗಂಭೀರತೆ ಅರಿತು ಸುಹಾಸ್ ಹತ್ಯೆಯನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸುವಲ್ಲಿ ಕೇಂದ್ರ ಗೃಹ ಸಚಿವರು ಮುತುವರ್ಜಿ ವಹಿಸಿ ತ್ವರಿತ ಕ್ರಮ ಕೈಗೊಂಡಿರುವುದಕ್ಕೆ ಸಂಸದ ಬ್ರಿಜೇಶ್ ಚೌಟ ಅವರು ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net