

ಮಂಗಳೂರು : ಭಾರತೀಯ ಸೈನ್ಯದಲ್ಲಿ ಕೆಲಸ ಮಾಡಿದ ಬಿಜೆಪಿಯ ಯುವ ಕಾರ್ಯಕರ್ತನಾದ ನನಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಚುನಾವಣೆ ಘೋಷಣೆಯಾದ ದಿನದಿಂದ ಇವತ್ತಿನ ವರೆಗೆ ಪಕ್ಷದ ಅಧ್ಯಕ್ಷರು ಮತ್ತು ಪ್ರಭಾರಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಓಡಾಡಿ ಮತದಾರರನ್ನು ತಲುಪುವ ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಚುನಾವಣೆ ಘೋಷಣೆಯಾದ ಕೂಡಲೇ ಮೊದಲು ಹುತಾತ್ಮರ ಸ್ಮಾರಕ್ಕೆ ತೆರಳಿ ಈ ಮಣ್ಣಿಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಿ ನನ್ನ ಚುನಾವಣಾ ಪ್ರಚಾರವನ್ನು ಆರಂಭಿಸಿದೆ. ಎಲ್ಲ ಪಂಚಾಯತ್ ಕ್ಷೇತ್ರಗಳಿಗೆ ಹೋಗಿ ಕಾರ್ಯಕರ್ತರ ಜತೆ ಮಾತನಾಡಿ ಅವರ ಪ್ರೀತಿ ವಿಶ್ವಾಸ, ಸಹಕಾರದ ಮೂಲಕ ಮತದಾರರನ್ನು ತಲುಪುವ ಕೆಲಸ ಮಾಡಿದ್ದೇನೆ ಎಂದರು.
ಜಾರ್ಜ್ ಫೆರ್ನಾಂಡಿಸ್ ಅವರು ತುಳುನಾಡಿನ ಹೆಮ್ಮೆ. ಅವರು ಶಿಕ್ಷಣ ಪಡೆದ ಸಂತ ಅಲೋಶಿಯಸ್ ಕಾಲೇಜಿನಲ್ಲೇ ನಾನೂ ಶಿಕ್ಷಣ ಪಡೆದಿದ್ದೇನೆ.ಕೊಂಕಣ ರೈಲ್ವೆಯ ಕೆಲಸವನ್ನು ಕಲ್ಪನೆಯಿಂದ ಅನುಷ್ಠಾನದ ವರೆಗೂ ಪೂರ್ಣವಾಗಿ ನಿರ್ವಹಿಸಿದ ಮಹಾನ್ ವ್ಯಕ್ತಿ ಅವರು. ಅವರನ್ನು ಆದರ್ಶವಾಗಿ ಇಟ್ಟುಕೊಂಡು ಸರಳತೆ, ಸ್ಪಷ್ಟ ವಿಚಾರ, ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಮಾಡುವೆ ಎಂದರು.
ನಾಮಪತ್ರ ಸಲ್ಲಿಕೆಗೆ ಒಂದು ದಿನ ಮೊದಲು ಮೀನುಗಾರ ಮಹಿಳೆಯರು, ಹೂ ಮಾರುವ ಮಹಿಳೆಯರು, ಸಾಮಾನ್ಯರಿಂದ ಅತಿ ಸಾಮಾನ್ಯರಾಗಿರುವ ಮಹಿಳೆಯರು ಬಂದು ಇಡುಗಂಟಿನ ಮೊತ್ತಕ್ಕೆ ತಮ್ಮ ದೇಣಿಗೆಯನ್ನು ಕೊಟ್ಟಿದ್ದರು. ಇದು ನನ್ನ ಹೃದಯಕ್ಕೆ ತಟ್ಟಿದ ಅತ್ಯಂತ ಭಾವನಾತ್ಮಕ ಕ್ಷಣ. ಪ್ರಧಾನಿ ನರೇಂದ್ರ ಮೋದಿಯವರು ತಾಯಂದಿರ ಮಧ್ಯೆ ತಲುಪಿದ್ದಾರೆ ಎಂಬುದಕ್ಕೆ ನಿದರ್ಶನವಾಗಿ ನನಗೆ ಈ ಘಟನೆ ಕಾಣಿಸಿತು. ಮಹಿಳೆಯರ ಭದ್ರತೆಯ ವಿಷಯದಲ್ಲಿ, ಗೌರದ ವಿಷಯದಲ್ಲಿ ನಾನು ಅವರ ಮಗನಾಗಿ ಕೆಲಸ ಮಾಡುವೆ ಎಂದು ಕ್ಯಾ. ಚೌಟ ಹೇಳಿದರು.
74 ವರ್ಷದ ಮಾಜಿ ಸೈನಿಕರೊಬ್ಬರು ತಮ್ಮ ತಿಂಗಳ ಪಿಂಚಣಿಯನ್ನು ಚುನಾವಣಾ ವೆಚ್ಚಕ್ಕೆ ನೀಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಒಬ್ಬ ಮಾಜಿ ಸೈನಿಕನಿಗೆ ಅವಕಾಶ ಕೊಟ್ಟಿರುವ ಕಾರಣಕ್ಕೆ ಅವರೆಲ್ಲ ಮೋದಿಯವರನ್ನು ತಮ್ಮ ಪರಿವಾರದವರು ಎಂದು ಭಾವಿಸಿದ್ದಾರೆ. ಜಿಲ್ಲೆಯಾದ್ಯಂತ ಪ್ರವಾಸ ಮಾಡುವ ಸಂದರ್ಭದಲ್ಲಿ ಯುವಕರು, ಮಹಿಳೆಯರು, ಬಡವರು, ವಿವಿಧ ರೀತಿಯ ಕಸುಬುದಾರರು ನನ್ನನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಬರಮಾಡಿಕೊಳ್ಳುತ್ತಾ ಬೆಂಬಲ ಸೂಚಿಸಿದ್ದಾರೆ. ಚುನಾವಣೆ ಪ್ರಚಾರ ಆರಂಭಿಸುವ ಸಮಯದಲ್ಲಿ ಹಿಂದುತ್ವಕ್ಕೆ ಬದ್ಧತೆ- ಅಭಿವೃದ್ಧಿಗೆ ಆದ್ಯತೆ ಎಂದು ಮಾತನಾಡಿದ್ದೆ. ಈ ಮೂಲ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕೆಲಸ
ಮಾಡುತ್ತೇನೆ ಎಂದು ಭರವಸೆ ನೀಡಿದರು.
ದ.ಕ.ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಿಯವರ ವಿಕಸಿತ ಭಾರತದ ಕಲ್ಪನೆಗೆ ಪೂರಕವಾಗಿ ಎಲ್ಲ ಶಾಸಕರ ಸಹಕಾರ ಪಡೆದುಕೊಂಡು ಈ ಕಾರ್ಯವನ್ನು ಸಾಧಿಸಬೇಕು ಎಂದು ನಾನು ತೀರ್ಮಾನಿಸಿದ್ದೇನೆ. 9 ಆದ್ಯತೆಯ ಕ್ಷೇತ್ರಗಳನ್ನು ಮುಂದಿಟ್ಟು 2047ರ ವೇಳೆಗೆ ವಿಕಸಿತ ಭಾರತವನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಗೆ ಪೂರಕವಾಗಿ ವಿಕಸಿತ ’ದಕ್ಷಿಣ ಕನ್ನಡ’ವನ್ನು ಸಾಕಾರಗೊಳಿಸಲು ಈ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ. ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು, ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಸ್ಟಾರ್ಟ್ ಅಪ್ ಮತ್ತು ಉದ್ಯಮಶೀಲತೆ, ಪ್ರವಾಸೋದ್ಯಮ, ನಾರಿಶಕ್ತಿ,
ಸಂಸ್ಕೃತಿ ಹಾಗೂ ಪರಂಪರೆ, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಯುವಜನತೆ ಮತ್ತು ಸಂವಹನ, ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ ಇವು 9 ಆದ್ಯತಾ ಕ್ಷೇತ್ರಗಳು ಎಂದು ಚೌಟ ಹೇಳಿದರು.
ಮತದಾನದ ಆರಂಭದಲ್ಲೇ ಎಲ್ಲ ಬೂತ್‌ಗಳಲ್ಲೂ 9 ಮಂದಿ ಮಹಿಳೆಯರು ಮತದಾನ ಮಾಡಲಿದ್ದಾರೆ. ಆ ಮೂಲಕ ನವದುರ್ಗೆಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ನೀಡಿ ಆಶೀರ್ವದಿಸಲಿದ್ದಾರೆ ಎಂದು ಕ್ಯಾಪ್ಟನ್ ಚೌಟ ಹೇಳಿದರು.
ಜಿಲ್ಲಾ ಬಿಜೆಪಿ ಅದ್ಯಕ್ಷ ಸತೀಶ್ ಕುಂಪಲ, ಚುನಾವಣಾ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ
ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ,ಯತೀಶ್ ಅರ್ವಾರ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ , ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಉಪಸ್ಥಿತರಿದ್ದರು.