

ಮಂಗಳೂರು : ಮಂಗಳೂರಿನ ಕಾರ್ಮಿಕ ರಾಜ್ಯ ವಿಮಾ(ಇಎಸ್‌ಐ) ಆಸ್ಪತ್ರೆಯ ಸುಧಾರಣೆಗೆ ರಾಜ್ಯ ಸರ್ಕಾರ ಶೀಘ್ರ ರಾಜ್ಯ ಇಎಸ್‌ಐ ಸೊಸೈಟಿ ರಚಿಸಬೇಕೆಂದು ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಚಿವರಿಗೆ ಪತ್ರ ಬರೆದಿರುವ ಸಂಸದರು, ರಾಜ್ಯ ಇಎಸ್‌ಐ ಸೊಸೈಟಿ ರಚನೆಯಿಂದ ಇಎಸ್‌ಐ ಆಸ್ಪತ್ರೆಗಳಲ್ಲಿ ಮೂಲಸೌಕರ್ಯದ ತ್ವರಿತ ಸುಧಾರಣೆ, ವೈದ್ಯಕೀಯ ಉಪಕರಣಗಳ ಖರೀದಿ, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅನುಕೂಲವಾಗಲಿದೆ.ಅನುಭವಿ ತಜ್ಞ ವೈದ್ಯರು ಮತ್ತು ನುರಿತ ಸಿಬ್ಬಂದಿ ನೇಮಕ ಮಾಡಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ಸಂಸದ ಕ್ಯಾ. ಚೌಟ ಅವರು ಮಂಗಳೂರು ಇಎಸ್‌ಐ ಆಸ್ಪತ್ರೆಯ ಸಮಸ್ಯೆಗಳ ಕುರಿತು ಚರ್ಚಿಸಲು ಇತ್ತೀಚೆಗೆ ದೆಹಲಿಯಲ್ಲಿ ನೌಕರರ ರಾಜ್ಯ ವಿಮಾ ನಿಗಮದ ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಈ ಸಂದರ್ಭ ಇಎಸ್‌ಐಸಿಗೆ ಸಂಬಂಧಿಸಿದ ರಾಜ್ಯದ ಎಲ್ಲಾ ಕಾರ್ಯ-ಚಟುವಟಿಕೆ ಸುಗಮಗೊಳಿಸಲು ಮತ್ತು ಕೇಂದ್ರದಿಂದ ಅನುದಾನ ಬಿಡುಗಡೆ ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರ್ಕಾರ ಪ್ರತ್ಯೇಕ ಸೊಸೈಟಿ ರಚಿಸಬೇಕು ಎಂದು ಡಿಜಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಶೀಘ್ರವಾಗಿ ರಾಜ್ಯ ಇಎಸ್‌ಐ ಸೊಸೈಟಿ ರಚನೆ ಸಂಬಂಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಂಸದರು ಕಾರ್ಮಿಕ ಸಚಿವರನ್ನು ಒತ್ತಾಯಿಸಿದ್ದಾರೆ.