

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕ ದ್ರವ್ಯ ಮಾರಾಟ ಚಟುವಟಿಗೆಗಳ ಕುರಿತು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಲೋಕಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.
ಮಂಗಳೂರು ನಗರವು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ದೇಶದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಮಾದಕ ದ್ರವ್ಯಗಳ ವ್ಯಾಪಾರ ಹೆಚ್ಚಾಗಿದ್ದು, ಪ್ರತಿ ತಿಂಗಳ ಮಾಧ್ಯಮಗಳ ಹೆಡ್ಲೈನ್ಗಳನ್ನು ಗಮನಸಿದರೆ ನಗರದಲ್ಲಿ ಡ್ರಗ್ಸ್ನ ಅತಿರೇಕದ ಚಟುವಟಿಕೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು ಎಂದು ಸಂಸದರು ಹೇಳಿದರು.
ಕಳೆದ ವರ್ಷ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು ಎನ್ನುವುದು ಸಾಬೀತಾಗಿತ್ತು. ಪೊಲೀಸರಿಂದ ನಿರಂತರ ಕಾರ್ಯಾಚರಣೆ ನಡೆದರೂ ಮಾದಕದ್ರವ್ಯ ಮಾರಾಟಕ್ಕೆ ಕಡಿವಾಣ ಸಾಧ್ಯವಾಗಿಲ್ಲ. ಶಾಲಾ ಮಕ್ಕಳು ಕೂಡ ಇದರ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕದ ವಿಷಯ. ಉತ್ತಮ ಆದಾಯವನ್ನು ಹೊಂದಿರುವ ಮನೆತನದ ಯುವಕ, ಯುವತಿಯರು ಡ್ರಗ್ ಪೆಡ್ಲರ್ಗಳ ಮುಖ್ಯ ಟಾರ್ಗೆಟ್ ಆಗಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಾದಕ ದ್ರವ್ಯ ಚಟುವಟಿಗಳನ್ನು ಮಟ್ಟ ಹಾಕಬೇಕಾಗಿದೆ .ಯಾಕೆಂದರೆ ಇದರಿಂದ ಬರುವ ಆದಾಯವು ನೇರವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ .ಆದ್ದರಿಂದ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾದಕದ್ರವ್ಯದ ಜಾಲವನ್ನು ಬುಡ ಸಮೇತ ಕಿತ್ತೊಗೆಯಲು ಕ್ರಮ ಕೈಗೊಳ್ಳಬೇಕೆಂದು ಸಂಸದ ಕ್ಯಾ.ಚೌಟ ಒತ್ತಾಯಿಸಿದರು.