

ಮಂಗಳೂರು : ದೇಶವನ್ನೇ ಬೆಚ್ಚಿಬೀಳಿಸಿದ್ದ ಕುಕ್ಕರ್ ಬಾಂಬ್ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕ್ಷುಲ್ಲಕ ಘಟನೆಯಂತೆ ಬಿಂಬಿಸಿದೆ. ಭಯೋತ್ಪಾದಕ ಕೃತ್ಯವನ್ನು ಸಾಮಾನ್ಯ ಘಟನೆಯೆಂದು ಸರ್ಕಾರದ ಆದೇಶ ಪತ್ರದಲ್ಲಿ ತೋರಿಸಿದ್ದು ಗಂಭೀರ ಪ್ರಮಾದ. ಇದು ಮುಸ್ಲಿಂ ತುಷ್ಟೀಕರಣ ಮಾತ್ರವಲ್ಲ. ದೇಶಕ್ಕೆ ಆತಂಕ ತಂದೊಡ್ಡಿರುವ ಭಯೋತ್ಪಾದಕರನ್ನು ಕಾಂಗ್ರೆಸ್ ಓಲೈಕೆ ಮಾಡಿದಂತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ ಟೀಕಿಸಿದ್ದಾರೆ.
ಬಾಂಬ್ ಘಟನೆಯೆಂದು ಹೇಳುವುದಕ್ಕೂ ಭಯಪಟ್ಟಿರುವುದನ್ನು ನೋಡಿದರೆ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸಲು ಯಾವ ಸ್ಥಿತಿಗೂ ಇಳಿಯುತ್ತದೆ ಎನ್ನುವುದನ್ನು ತೋರಿಸಿದೆ. ಕುಕ್ಕರ್ ಬಾಂಬ್ ಘಟನೆಯಲ್ಲಿ ಗಂಭೀರ ಗಾಯಗೊಂಡು ಬದುಕುಳಿದಿರುವ
ಪುರುಷೋತ್ತಮ ಪೂಜಾರಿ ಅವರಿಗೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ನೆರವು ನೀಡಿದ್ದು ಒಳ್ಳೆಯ ಕೆಲಸವೇ ಆಗಿದ್ದರೂ, ಮುಖ್ಯಮಂತ್ರಿ ಕಚೇರಿಯ ಆದೇಶ ಪತ್ರದಲ್ಲಿ ಅದು ಭಯೋತ್ಪಾದಕ ಕೃತ್ಯವೇ ಅಲ್ಲ ಎನ್ನುವುದನ್ನು ಹೇಳಿದಂತಿದೆ.
ಇದು ಸಾಮಾನ್ಯ ಘಟನೆಯೇ ಆಗಿದ್ದರೆ, ಕುಕ್ಕರ್ ಹಿಡಿದಿದ್ದ ವ್ಯಕ್ತಿಗೂ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕುಕ್ಕರ್ ಬಾಂಬ್ ಘಟನೆಯ ಬಗ್ಗೆ ದೇಶದ ಅತ್ಯುನ್ನತ ತನಿಖಾ ಏಜನ್ಸಿಯಾದ ಎನ್‌ಐಎ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಕುಕ್ಕರ್ ಹಿಡಿದ ವ್ಯಕ್ತಿ ಮಂಗಳೂರಿನ ಕದ್ರಿ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಎನ್ನುವುದನ್ನೂ ಹೇಳಿದೆ. ಸಾಕಷ್ಟು ಪುರಾವೆಗಳನ್ನು ಕಲೆಹಾಕಿದ ಬಳಿಕವೇ ಎನ್‌ಐಎ ಈ ಮಾಹಿತಿಗಳನ್ನು ಮಾಧ್ಯಮಕ್ಕೆ ನೀಡಿತ್ತು. ಹೀಗಿದ್ದರೂ, ಕಾಂಗ್ರೆಸ್ ಸರ್ಕಾರ ಮಾತ್ರ ಇದು ಸಾಮಾನ್ಯ ಘಟನೆಯೆಂದು ಚಿತ್ರಿಸಿ ಉಗ್ರರನ್ನು ತಮ್ಮ ಸೋದರರು ಎಂದು ಈ ಹಿಂದೆ ಹೇಳಿದ್ದ ಮಾತನ್ನು ಸಾಬೀತು ಪಡಿಸಿದೆ ಎಂದು ಬೃಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.