ಚಾಮರಾಜೇಂದ್ರ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ

sankranthi
Published on

ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್‌ನಲ್ಲಿ ಶನಿವಾರ ಸಾಂಪ್ರದಾಯಿಕವಾಗಿ ಮಕರ ಸಂಕ್ರಾಂತಿ ಆಚರಿಸಲಾಯಿತು.


ಇಡೀ ಶಾಲಾ ಆವರಣದಲ್ಲಿ ಹಳ್ಳಿಯ ವಾತಾವರಣ ನಿರ್ಮಾಣವಾಗಿತ್ತು. ಗುಡಿಸಲು, ಎತ್ತಿನಬಂಡಿ ಸವಾರಿ, ಗೋಪೂಜೆ, ಧಾನ್ಯ ಪೂಜೆ ಮತ್ತು ಸುಮಂಗಲಿ ಪೂಜೆಯೊಂದಿಗೆ ಪುರಾತನ ಪದ್ಧತಿ ಮತ್ತು ಆಧುನಿಕ ಆಚರಣೆಯ ಸಾಮರಸ್ಯದೊಂದಿಗೆ ಹಬ್ಬ ಆಚರಿಸಲಾಯಿತು. ಗುಡಿಸಲು ಮತ್ತು ಎತ್ತಿನಬಂಡಿಯ ಸವಾರಿ ಹಳ್ಳಿಯ ಜೀವನ ಪದ್ಧತಿ ಪ್ರತೀಕವಾಗಿತ್ತು. ಎಸ್‌ಸಿಎಸ್‌ಇ ವಿದ್ಯಾರ್ಥಿಗಳ ಭಗವದ್ಗೀತೆ ಪಠಣ, ಲಕ್ಷ್ಮೀ ಗೀತೆ ಮತ್ತು ಮೈಸೂರು ಸಂಸ್ಥಾನದ ಗೀತೆ ಗಾಯನಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಎಸ್‌ಜೆಯುಇಟಿ ಉಪಾಧ್ಯಕ್ಷ ಡಾ.ಭಾರತಿ ಶ್ರೀಧರ್ ರಾಜ್ ಅರಸ್ ಮತ್ತು ಟ್ರಸ್ಟ್ ಸದಸ್ಯರು ಶ್ರೀಕೃಷ್ಣನ ವಿಧ್ಯುಕ್ತ ಪೂಜೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಗೋಪೂಜೆಯು ಧಾರ್ಮಿಕ ಆರಾಧನೆ ಮತ್ತು ಪ್ರಾಣಿ ಪ್ರೀತಿಯ ಆಳವಾದ ಸಂಬಂಧವನ್ನು ತೋರಿಸಿಕೊಟ್ಟಿತು. ಎಸ್‌ಸಿಎಸ್‌ಇ ಶಿಕ್ಷಕರು ಸುಮಂಗಲಿಯರು ಪೂಜಾ ಕಾರ್ಯದಲ್ಲಿ ಧನ್ಯತೆ ಮೆರೆದರು. ಇದೇ ವೇಳೆ ಜಿಎಸ್‌ಎಸ್‌ನ ರೂಪಾ ಮತ್ತು ತಂಡದವರು ‘ವೃಕ್ಷರಕ್ಷಾ ಬಂಧ’ ಆಚರಿಸಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ರಕ್ಷೆಯೊಂದಿಗೆ ಸಸಿಗಳನ್ನು ವಿತರಿಸಲಾಯಿತು. ಸಿವಿಲ್ ಇಂಜಿನಿಯರ್ ರಮೇಶ್ ಕಿಕ್ಕೇರಿ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.


ಎಸ್‌ಜಿಯುಇಟಿ ಕಾರ್ಯದರ್ಶಿ ಎನ್.ಮಹೇಶ್, ಉಪಾಧ್ಯಕ್ಷ ಡಾ.ಭಾರತಿ ಶ್ರೀಧರ್ ರಾಜ್ ಅರಸ್, ಜಂಟಿ ಕಾರ್ಯದರ್ಶಿ ಸರ್ದಾರ್ ಶ್ರೀಕಾಂತ್ ರಾಜ ಅರಸ್, ಟ್ರಸ್ಟಿ ಡಾ.ಅಜಿತ್ ಕುಮಾರ್, ಬಾಲಚಂದ್ರ ರಾಜ್ ಅರಸ್, ಆರ್‌ಜೆ ಅವಿನಾಶ್ ಇತರರು ಇದ್ದರು. ಇದೇ ವೇಳೆ ಖಾರ ಪೊಂಗಲ್ ಹಾಗೂ ಸಿಹಿ ಪೊಂಗಲ್ ಹಂಚಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net