

ನಂಜನಗೂಡು : ಯಾವುದೇ ಹೋರಾಟವಿರಲಿ, ರೈತರು ಮಾತ್ರ ಸ್ವಾಭಿಮಾನದಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ತಿಳಿಸಿದರು.
ತಾಲೂಕಿನ ಗಟ್ಟವಾಡಿಪುರ ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಮತ್ತು ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಂದಾಗ ಸುಮಾರು 5 ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದೆ. ಆದರೂ ಕೂಡ ರೈತ ಸಂಘಟನೆಗಳನ್ನು ಏಕೆ ಮಾಡಬೇಕು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸ್ಥಳೀಯ ಸಂಘ, ಸಂಸ್ಥೆಗಳ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವವರು ರೈತರು. ದೇಶವನ್ನು ಕಟ್ಟಿದವರು ರೈತರು. ಆದರೆ ಇಂದು ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸೂಕ್ತ ಬೆಲೆಗಾಗಿ ರೈತರು ಇಂದು ಹೋರಾಟ ಮಾಡಬೇಕಾಗಿದೆ. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ರೈತರೇ ಕಟ್ಟಿರುವ ದೇಶದಲ್ಲಿ ಇಂದು ಲಕ್ಷಾಂತರ ಕೋಟಿ ರೂ. ಸಾಲ ಮಾಡಿ ಬೀದಿಗೆ ತಳ್ಳಿದ್ದಾರೆ. ಬಂಡವಾಳ ಶಾಹಿಗಳು ಬಂದು ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಕಬ್ಬಿನ ಬೆಲೆ ನಿಗದಿ ಮಾಡಲು ಲಕ್ಷಾಂತರ ಜನ ಸೇರಿ ಒಗ್ಗಟ್ಟು ಪ್ರದರ್ಶನ ಮಾಡಿದ ಫಲವಾಗಿ ಸರ್ಕಾರವೇ ಇತ್ತ ತಿರುಗುವಂತೆ ಮಾಡಿದ್ದು ರೈತರು. ಯಾವುದೇ ಜನಪ್ರತಿನಿಧಿ, ಅಧಿಕಾರಿಗಳು ಗ್ರಾಮಕ್ಕೆ ಬರಲಿ ಅವರ ಮುಂದೆ ಕೈಕಟ್ಟಿ ನಿಲ್ಲುವುದನ್ನು ರೈತರು ಮೊದಲು ಬಿಡಬೇಕು. ಪಕ್ಷ, ಜಾತಿ, ಭೇದ ಮಾಡದೆ ಒಗ್ಗಟ್ಟಾಗಿ ಮುನ್ನಡೆದರೆ ಗ್ರಾಮಗಳ ಬದಲಾವಣೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್ ರಾವ್, ಬೆಂಕಿ ಮಹಾದೇವ, ತಿಮ್ಮನಾಯಕ, ಶಂಕರ ನಾಯಕ, ಮಲ್ಲಹಳ್ಳಿ ರವಿ, ಚೆಲುವರಾಜು, ಸಿಂಧುವಳ್ಳಿ ಮಹದೇವ ನಾಯಕ, ಸೂರಹಳ್ಳಿ ಮಹದೇವ ನಾಯಕ, ನಾಗನಾಯಕ, ಕುಮಾರ್, ಗ್ರಾಮ ಘಟಕದ ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ಶಿವಕುಮಾರ್, ಸತೀಶ್, ಗಿರೀಶ್, ಮಹದೇವಸ್ವಾಮಿ, ಮಾದಣ್ಣ, ಮಹದೇವ ನಾಯಕ ಸೇರಿದಂತೆ ಗ್ರಾಮದ ನೂರಾರು ಜನ ಉಪಸ್ಥಿತರಿದ್ದರು.