ಬೆಲೆ ಇಳಿಕೆ ಎಲೆಕೋಸಿನ ಸರದಿ

web (1)
Published on

ಚಿಕ್ಕಮಗಳೂರು: ಲಾಕ್​ಡೌನ್​ನಿಂದ ಬೆಲೆ ಕುಸಿತದಿಂದ ತರಕಾರಿಗಳು ಮಣ್ಣು ಪಾಲಾಗುತ್ತಿವೆ. ಎಲೆಕೋಸು ಸಹ ಅದರ ಸರದಿಗೆ ಸೇರಿದ್ದು, ಜಾನುವಾರುಗಳಿಗೆ ಮೇವಾಗುತ್ತಿದೆ.

ಬಣ್ಣದ ಸೌತೆ, ಗುಳ್ಳಬದನೆ, ಕ್ಯಾರೆಟ್, ಬೀಟ್ರೂಟ್, ಬೀನ್ಸ್​ಗಳಿಗೆ ಬೆಲೆ ಸಿಗದೆ ರೈತ ಕಟಾವು ಮಾಡದಿದ್ದರಿಂದ ಹೊಲದಲ್ಲೇ ಕೊಳೆತು ಗೊಬ್ಬರವಾಗಿವೆ. ಈಗ ಅದೇ ಸಾಲಿಗೆ ಎಲೆಕೋಸು ಸೇರಿದ್ದು ತಾಲೂಕಿನಲ್ಲಿ ವಾರದ ಹಿಂದೆ ಹಲವು ರೈತರು ಸಿಕ್ಕಷ್ಟು ಹಣಕ್ಕೆ ಮಾರಾಟ ಮಾಡಿದ್ದಾರೆ.

ಚಿಕ್ಕನಹಳ್ಳಿ ರೈತ ಅಣ್ಣೇಗೌಡ, ಲಕ್ಯಾ ಮಲ್ಲೇಶಾಚಾರ್, ನಟರಾಜ್, ಲಕ್ಷ್ಮೀಪುರ ಷಡಾಕ್ಷರಿ, ಬಿಳೇಕಲ್ಲಳ್ಳಿ, ಕ್ಯಾತನಬೀಡು, ಗಾಣದಾಳು, ಚಿಕ್ಕಗೌಜ, ಕರಿಸಿದ್ದನಹಳ್ಳಿ, ಹಿರೇಗೌಜ, ದೇವರಹಳ್ಳಿ, ವಡೇರಹಳ್ಳಿ, ದೇವಗೊಂಡನಹಳ್ಳಿ, ಸಿಂದಿಗೆರೆ, ಕುರಿಚಿಕ್ಕನಹಳ್ಳಿ, ಬಸವನಕೋಡಿ ಸೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಎಲೆಕೋಸು ಕಟಾವಿಗೆ ಬಂದಿದ್ದರೂ ಕೊಳ್ಳುವವರಿಲ್ಲದೆ ಬೇಸತ್ತು ಬಹುತೇಕ ರೈತರು ಜಮೀನಿಗೆ ಗೊಬ್ಬರವಾಗಿಸಿಕೊಂಡಿದ್ದಾರೆ. ಕೆಲ ರೈತರು ಜಾನುವಾರುಗಳನ್ನು ಮೇಯಲು ಬಿಟ್ಟಿದ್ದಾರೆ.

ಒಂದು ಎಕರೆಗೆ 25 ಸಾವಿರ ರೂ. ಬಂಡವಾಳ ಹೂಡಿ ಬೀಜ ಬಿತ್ತಿ, ಔಷಧ, ಗೊಬ್ಬರ ಹಾಕಿ, ಬೋರ್​ವೆಲ್ ನೀರು ಹಾಯಿಸಿ ಬೆಳೆದಿದ್ದ ಎಲೆಕೋಸು ಉತ್ತಮ ಫಸಲು ಬಂದಿದ್ದರೂ ಖರೀದಿಗೆ ಕೇಳುತ್ತಿರುವುದು ಮಾತ್ರ 90 ಕೆಜಿ ಚೀಲಕ್ಕೆ 40 ರೂ. ಅಂದರೆ ಕೆಜಿಗೆ 50 ಪೈಸೆಯಂತೆ ! ಖರೀದಿ ದರ ಕೇಳಿ ಬೇಸತ್ತ ರೈತರು ಹೊಲದಲ್ಲಿ ಮೇಯಲು ಜಾನುವಾರುಗಳನ್ನು ಬಿಟ್ಟಿದ್ದಾರೆ.

250 ಚೀಲ ಎಲೆ ಕೋಸಿದೆ. ಚೀಲಕ್ಕೆ 40 ರೂ. ಗೆ ಕೇಳಿದ್ದರು. ಸದ್ಯ ಯಾವ ವ್ಯಾಪಾರಸ್ಥರೂ ಕೊಳ್ಳಲು ಬರುತ್ತಿಲ್ಲ. ಒಂದು ಎಲೆಕೋಸು ಬೆಳೆಯಲು 3 ರೂ. ವೆಚ್ಚವಾಗಿರುತ್ತದೆ. ಅದನ್ನು ಪೈಸೆ ಲೆಕ್ಕದಲ್ಲಿ ಕೇಳಿದರೆ ಎಲೆ ಕೋಸಷ್ಟೇ ಅಲ್ಲ ಯಾವ ಬೆಳೆ ಬೆಳೆಯಲೂ ಧೈರ್ಯ ಬರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ತರಕಾರಿಗಳಿಗೆ ನೇರ ಮಾರುಕಟ್ಟೆ ದೊರಕಿಸಿ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡಿದರೆ ಮಾತ್ರ ಕೃಷಿಕನ ಮಕ್ಕಳೂ ಕೃಷಿ ಕಾರ್ಯ ಮಾಡಲು ಬರುತ್ತಾರೆ. ಇಲ್ಲವಾದಲ್ಲಿ ಅವರಿಗೂ ಮನಸ್ಸಾಗುವುದಿಲ್ಲ ಎಂದು ರೈತ ಅಣ್ಣೇಗೌಡ ಅಳಲು ತೋಡಿಕೊಂಡರು.

ತರಕಾರಿಗಳನ್ನು ರೈತರಿಂದ ಪೈಸೆ ಲೆಕ್ಕದಲ್ಲಿ ಖರೀದಿಸುವ ವರ್ತಕರು ಹೋಲ್​ಸೇಲ್ ದರದಲ್ಲಿ ಮಾರಿದರೂ ಸಾವಿರಾರು ಲಾಭ ಗಳಿಸುತ್ತಾರೆ. ನಗರದ ತರಕಾರಿ ಅಂಗಡಿಗಳು, ತಳ್ಳುವಗಾಡಿಗಳಲ್ಲಿ ಎಲೆಕೋಸಿನ ಕೆಜಿಗೆ 20 ರೂ. ಗಿಂತ ಕಮ್ಮಿ ಇಲ್ಲ. ಬೆಳೆದವನಿಗೆ ಮಾತ್ರ ತಕ್ಕ ದರ ಸಿಗುತ್ತಿಲ್ಲ ಎನ್ನುತ್ತಾರೆ ಜ್ಯೋತಿ ಕೆಂಪನಹಳ್ಳಿ.

ವರ್ತಕರು ಹೊಲಕ್ಕೆ ಹೋಗಿ ಕಾರ್ವಿುಕರಿಂದ ಕೋಸು ಕಟಾವು ಮಾಡಿಸಿ ಮೂಟೆಯನ್ನು ಎಪಿಎಂಸಿಗೆ ತರಲು ವಾಹನ ಬಾಡಿಗೆ ಸೇರಿ ಒಂದು ಮೂಟೆಗೆ 100 ರೂ. ಖರ್ಚು ಬರುತ್ತದೆ. ದಿನಗಟ್ಟಲೆ ಕಾದು 150 ರೂ. ಗೆ ಮಾರಾಟ ಮಾಡಿದರೆ ಒಂದಿಷ್ಟು ಲಾಭ ಕಾಣುತ್ತೇವೆ. ಲಾಕ್​ಡೌನ್​ನಿಂದ ಹೊರ ರಾಜ್ಯಗಳಿಗೆ ಸಾಗಣೆ ಮಾಡುವುದು ಕಡಿಮೆಯಾಗಿದೆ. ಕೆಲವೊಮ್ಮೆ ಬೆಲೆ ಏರಿಳಿತವಾಗಿ ತರಕಾರಿಗಳು ಮಾರಾಟವಾಗದೆ ನಷ್ಟ ಹೊಂದಿರುವುದೂ ಉಂಟು ಎಂಬುದು ವರ್ತಕ ಸಂಜಯ್ ಅಭಿಪ್ರಾಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net