

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಗದಿತ ಸಮಯದೊಳಗೆ ಆಸ್ತಿ ತೆರಿಗೆ ಪಾವತಿಸದಿದ್ದಲ್ಲಿ ಮರು ವರ್ಷ ಅದರ ದುಪ್ಪಟ್ಟು ಹಣವನ್ನು ದಂಡದ ರೂಪದಲ್ಲಿ ಶೇ.15 ಬಡ್ಡಿ ದರದೊಂದಿಗೆ ಕಡ್ಡಾಯವಾಗಿ ಪಾವತಿ ಮಾಡಬೇಕೆಂಬ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶ ಈಗ ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ.
ಪಾಲಿಕೆಯಿಂದ ನಾಗರಿಕರಿಗೆ ಮೂಲಸೌಲಭ್ಯ ಸಿಗುತ್ತದೋ ಇಲ್ಲವೊ, ಟ್ಯಾಕ್ಸ್ ಮಾತ್ರ ತಪ್ಪದೇ ಪಾವತಿಸಬೇಕೆಂಬ ಸರ್ಕಾರದ ನೀತಿ ರಾಜಧಾನಿಗರಿಗೆ ಭಾರಿ ಹೊಡೆತ ನೀಡಲಿದೆ. ಈವರೆಗೆ ತೆರಿಗೆ ಪಾವತಿಸದವರು ಮರು ವರ್ಷ ಇಂತಿಷ್ಟು ದಂಡದೊಂದಿಗೆ ಪಾವತಿಸಲು ಅವಕಾಶ ಇತ್ತು. ಪ್ರಸಕ್ತ ಸಾಲಿಗೆ ಅನ್ವಯಿಸುವಂತೆ ಒಂದು ಬಾರಿಯ ಇತ್ಯಾರ್ಥ ಯೋಜನೆ (ಒಟಿಎಸ್) ಯಿಂದ ಬಿಬಿಎಂಪಿಗೆ ಹೆಚ್ಚಿನ ಪ್ರಮಾಣದ ಆದಾಯ ಸಂಗ್ರಹವಾಗಿರುವ ಹಿನ್ನೆಲೆ, 2025-26ನೇ ಸಾಲಿನಿಂದ ಗಡುವಿನೊಳಗೆ ಆಸ್ತಿ ತೆರಿಗೆ ಪಾವತಿಸಲೇಬೇಕು. ಒಂದು ವೇಳೆ ಟ್ಯಾಕ್ಸ್ ಕಟ್ಟದಿದ್ದರೆ ದಂಡದ ಹಣದೊಂದಿಗೆ ಪಾವತಿಸಬೇಕಾದ ನಿಯಮ ಕಡ್ಡಾಯವಾಗಲಿದೆ. ಇದರಿಂದ ಅನಿವಾರ್ಯ ಕಾರಣದಿಂದ ತೆರಿಗೆ ಕಟ್ಟಡ ಬಡ ವರ್ಗದವರು ಒಮ್ಮೆಲೆ ಸಾವಿರಾರು ಪಾವತಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಉದಾಹರಣೆಗೆ, ಒಂದು ಸ್ವತ್ತಿಗೆ ವಾರ್ಷಿಕ ತೆರಿಗೆ 25 ಸಾವಿರ ರೂ. ಇದ್ದಲ್ಲಿ ಆ ಮೊತ್ತವನ್ನು ಪಾವತಿಸದಿದ್ದಲ್ಲಿ, ಮುಂದಿನ ಆರ್ಥಿಕ ವರ್ಷದಲ್ಲಿ ದುಪ್ಪಟ್ಟು ಹಣ 50 ಸಾವಿರ ರೂ. ದಂಡದ ರೂಪದಲ್ಲಿ ಪಾವತಿಸಬೇಕು. ಜತೆಗೆ ಶೇ.15 ಬಡ್ಡಿಯೊಂದಿಗೆ ಒಟ್ಟು 53,750 ರೂ. ಪಾವತಿಸಬೇಕಾಗುತ್ತದೆ. ಈ ಹಣವನ್ನು ಯಾವುದೇ ಕಾರಣಕ್ಕೂ ಮನ್ನಾ ಆಗದು. ಒಟಿಎಸ್ ಯೋಜನೆ ಮತ್ತೆ ಅನ್ವಯವಾಗದ ಕಾರಣ ಅನಿವಾರ್ಯವಾಗಿ ಜನರು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಂತಹ ಕಠಿಣ ಹಾಗೂ ಜನರಿಂದ ಹೆಚ್ಚಿನ ಹಣವನ್ನು ತೆರಿಗೆ ರೂಪದಲ್ಲಿ ಬಲವಂತಾಗಿ ವಸೂಲು ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು ಆಗಲಿದೆ ಎಂದು ಮಾಜಿ ಕಾರ್ಪೊರೇಟರ್‌ಗಳು ಕೂಡ ದನಿ ಸೇರಿಸಿದ್ದಾರೆ.
ಆದಾಯ ಸಂಗ್ರಹ ನೆಪದಲ್ಲಿ ದುರಾಡಳಿತ:
ಬಿಬಿಎಂಪಿಗೆ ಪ್ರತಿ ವರ್ಷ ಸಂದಾಯವಾಗು ಆದಾಯದಲ್ಲಿ ಆಸ್ತಿತೆರಿಗೆ ಪಾಲು ದೊಡ್ಡದಿದೆ. 2024-25ನೇ ಸಾಲಿನಲ್ಲಿ ಈವರೆಗೆ 4,600 ಕೋಟಿ ರೂ. ಸಂಗ್ರಹಿಸಲಿದೆ. ಜಾಹೀರಾತು ಶುಲ್ಕ, ಎಫ್ಎಆರ್ ಶುಲ್ಕ ಸಹಿತ ಬಾಬ್ತಿನಡಿ 4-5 ಸಾವಿರ ಕೋಟಿ ರೂ. ವಸೂಲಾಗಲಿದೆ. ಜತೆಗೆ ಸರ್ಕಾರದ ಅನುದಾನ ಸೇರಿ 15 ಸಾವಿರ ಕೋಟಿ ರೂ.ಗೂ ಹೆಚ್ಚು ಸಂಪನ್ಮೂಲ ಕ್ರೋಡೀಕರಿಸಬಹುದು. ಇಷ್ಟು ಹಣವನ್ನು ಪಾರದರ್ಶಕವಾಗಿ ಖರ್ಚು ಮಾಡಿದ್ದಲ್ಲಿ ಜನರಿಗೆ ಹೊರೆ ಎನಿಸುವ ತೆರಿಗೆ ಹಾಕುವ ಪ್ರಮೇಯ ಬಾರದು. ಆದರೆ, ಈ ಸೂತ್ರವನ್ನು ಒಪ್ಪದ ಅಧಿಕಾರಿಗಳು ಜನರಿಂದಲೇ ಹೆಚ್ಚು ತೆರಿಗೆ ವಸೂಲು ಮಾಡಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ. ಹಾಗಾಗಿ ಆಸ್ತಿ ತೆರಿಗೆ ನಿಗದಿ ನಾಗರಿಕ ಸ್ನೇಹಿ ಆಗಿ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂಬ ಮಾತು ಎಲ್ಲೆಡೆ ಕೇಳಿಬಂದಿದೆ.
ಇಚ್ಛಾಶಕ್ತಿ ಪ್ರದರ್ಶಿಸದ ಅಧಿಕಾರಿ ವರ್ಗ:
ಪಾಲಿಕೆಗೆ ಸಂಪನ್ಮೂಲ ಸಂಗ್ರಹಿಸಲು ಹತ್ತಾರು ಮೂಲಗಳು ಇವೆ. ಆದರೆ, ಅಂತಹ ದಾರಿಗಳನ್ನು ಹುಡುಕಿ ಸಮರ್ಪಕವಾಗಿ ಜಾರಿಗೆ ತರುವಲ್ಲಿ ಅಧಿಕಾರಿ ವರ್ಗ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ನಗರದಲ್ಲಿ ಜಾಹೀರಾತು ಪ್ರದರ್ಶಿಸಲು ಕಂಪನಿಗಳು ಪಾಲಿಕೆ ಕಚೇರಿಗಳಲ್ಲಿ ಕ್ಯೂನಲ್ಲಿ ನಿಂತಿವೆ. ಈ ಬಾಬ್ತಿನಿಂದ ವಾರ್ಷಿಕ 500 ಕೋಟಿ ರೂ.ಗೂ ಅಧಿಕ ಕರ ಸಂಗ್ರಹಿಸಬಹುದು. ನಗರ ಯೋಜನೆ ವಿಭಾಗದಲ್ಲಿ ನಕ್ಷೆ ಮಂಜೂರಾತಿ ಶುಲ್ಕ ಮತ್ತು ಸ್ವಾಧೀನಾನುಭವ ಪತ್ರ ಶುಲ್ಕದ ಮೂಲಕ 3,000 ಕೋಟಿ ರೂ. ಸಂಗ್ರಹಿಸಲು ಅವಕಾಶ ಇದ್ದರೂ, ಸೋರಿಕೆಯೇ ಹೆಚ್ಚಾಗುತ್ತಿದೆ. ರಸ್ತೆ ಅಗೆತದ ಶುಲ್ಕದಿಂದ 1,000 ಕೋಟಿ ರೂ. ಹಾಗೂ ವಾಣಿಜ್ಯ ಉದ್ದಿಮೆ ಪರವಾನಗಿಯಿಂದ 500 ಕೋಟಿ ರೂ. ಸಂಗ್ರಹಿಸಲು ಅವಕಾಶವಿದೆ. ಅಂದರೆ ಆಸ್ತಿತೆರಿಗೆ ಹೊರತುಪಡಿಸಿ 7-8 ಸಾವಿರ ಕೋಟಿ ರೂ. ವಸೂಲು ಮಾಡಬಹುದಾಗಿದ್ದರೂ, ಆಡಳಿತದಲ್ಲಿ ಬಿಗಿ ಮಾಡದ ಕಾರಣ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಹಾಗಾಗಿ ಪಾಲಿಕೆ ವಿವಿಧ ವಿಭಾಗಗಳಿಗೆ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ, ಸಿಬ್ಬಂದಿ ನಿಯೋಜಿಸಿದರೆ ಪಾಲಿಕೆಯ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬಹುದು ಎನ್ನುತ್ತಾರೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್.
ಶೇ.9 ಬಡ್ಡಿದರಕ್ಕೆ ಕೊಕ್:
ಈವರೆಗೆ ಜಾರಿಯಲ್ಲಿದ್ದ 2020ರ ಬಿಬಿಎಂಪಿ ಕಾಯ್ದೆ ಪ್ರಕಾರ ಆಸ್ತಿ ತೆರಿಗೆ ಪಾವತಿಸದಿದ್ದಲ್ಲಿ ಅಂತಹ ಸ್ವತ್ತುದಾರರು ಶೇ.9 ಬಡ್ಡಿಯೊಂದಿಗೆ ನಂತರದಲ್ಲಿ ಕಟ್ಟಲು ಅವಕಾಶ ಇತ್ತು. ಇದು ಜನರಿಗೆ ಹೊರೆ ಆಗದ ಕಾರಣ ಬಡ್ಡಿ ಪಾವತಿಗೆ ಯಾರ ವಿರೋಧವೂ ಇರಲಿಲ್ಲ. ಈಗ ಏಕಾಏಕಿ ದುಪ್ಟಟ್ಟು ತೆರಿಗೆ ಮೊತ್ತ ಹಾಗೂ ಶೇ.15 ದಂಡ ಪಾವತಿ ಜನವಿರೋಧಿ ನಿಲುವಾಗುತ್ತದೆ. ಜನರಿಗೆ ಹೊರೆಯಾಗದಂತೆ ತೆರಿಗೆ ವಸೂಲು ಮಾಡಬೇಕೆಂಬ ಜನಹಿತ ಸರ್ಕಾರದ ಆಶಯಕ್ಕೆ ಚ್ಯುತಿ ಬಂದಂತಾಗುತ್ತದೆ ಎಂದು ನಗರದ ಕೆಲ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಕೆಂಗೆಣ್ಣು ಬೀರಿವೆ.
ಆಸ್ತಿತೆರಿಗೆ ನಾಗರಿಕ ಸ್ನೇಹಿ ಆಗಿದ್ದಲ್ಲಿ ಎಲ್ಲರೂ ಸರಿಯಾದ ವೇಳೆಗೆ ಟ್ಯಾಕ್ಸ್ ಪಾವತಿಸುತ್ತಾರೆ. ಈ ಸೂಕ್ಷ್ಮವನ್ನು ಗ್ರಹಿಸದೆ ಬೊಕ್ಕಸ ತುಂಬಿಸಿಕೊಳ್ಳಲು ಯದ್ವಾತದ್ವಾ ತೆರಿಗೆ ಹಾಕಿ ಜನರಿಂದ ಬಲವಂತವಾಗಿ ವಸೂಲು ಮಾಡುವುದು ಸರಿಯಲ್ಲ. ದುಪ್ಪಟ್ಟು ದಂಡ ಹಾಗೂ ಶೇ.15 ಬಡ್ಡಿ ವಿಧಿಸುವುದು ಕೂಡ ಜನ ವಿರೋಧಿ ನಿಲುವು. ಈ ಕರಾಳ ಅಧಿಸೂಚನೆಯನ್ನು ಸರ್ಕಾರ ಹಿಂಪಡೆಯಲಿ.
- ಎನ್. ಆರ್.ರಮೇಶ್, ಬಿಜೆಪಿ ಮುಖಂಡ
ಸರ್ಕಾರ ಬೆಂಗಳೂರಿಗರ ಮೇಲೆ ಎಲ್ಲ ತರಹದ ತೆರಿಗೆಯನ್ನು ಹಾಕಿ ಜನರ ಜೀವ ಹಿಂಡುತ್ತಿದೆ. ತೆರಿಗೆ ಪಾವತಿಸಿದರೂ ರಸ್ತೆ ಸೇರಿ ಇತರ ಮೂಲಸೌಕರ್ಯ ಜನರಿಗೆ ಸಿಗುತ್ತಿಲ್ಲ. ಕಸ ವಿಲೇವಾರಿ ಎರಡೆರಡು ಬಾರಿ ಶುಲ್ಕ ವಸೂಲು ಮಾಡಲಾಗುತ್ತದೆ. ತೆರಿಗೆ ದುಡ್ಡನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದರಿಂದ ರಾಜಧಾನಿಗರಿಗೆ ಸೌಕರ್ಯ ಸಿಗುತ್ತಿಲ್ಲ ಈ ಅವೈಜ್ಞಾನಿಕ ತೆರಿಗೆ ಪದ್ಧತಿಯನ್ನು ಸರ್ಕಾರ ಕೈಬಿಡಲಿ.
- ಎಸ್.ಹರೀಶ್, ಮಾಜಿ ಉಪ ಮೇಯರ್