

ಬೆಂಗಳೂರು: ವೈಷ್ಣವ ಪಂಥ ಅನುಯಾಯಿಗಳ ಪ್ರಮುಖ ಆಚರಣೆ ‘ವೈಕುಂಠ ಏಕಾದಶಿ’ ನಿಮಿತ್ತ ರಾಜಧಾನಿಯ ವಿವಿಧ ದೇವಾಲಯಗಳಲ್ಲಿ ಸೋಮವಾರ (ಜ.6) ವೈಕುಂಠಪತಿ ಶ್ರೀನಿವಾಸನ ಆರಾಧನೆ ವಿಜೃಂಭಣೆಯಿಂದ ನಡೆಯಲಿದೆ. ಎಲ್ಲ ದೇಗುಲಗಳಲ್ಲಿ ವೈಕುಂಠದ್ವಾರದ ಮೂಲಕ ಸಾವಿರಾರು ಭಕ್ತರು ಪ್ರವೇಶ ಪಡೆಯಲಿದ್ದಾರೆ. ಉಪವಾಸ ವ್ರತಾಚರಣೆ ಈ ದಿನದ ಮಹತ್ವವಾಗಿದೆ.
‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುವ ಈ ಹಬ್ಬದಂದು ವೈಕುಂಠ ದ್ವಾರ ತೆರೆದಿರುತ್ತದೆ ಎಂಬುದು ಭಕ್ತರ ನಂಬಿಕೆ. ಶ್ರೀ ವಿಷ್ಣುವಿಗೆ ಅರ್ಪಿತವಾಗಿರುವ ಈ ದಿನ ಉಪವಾಸ ವ್ರತಾಚರಣೆ ಯೊಂದಿಗೆ ಸೂರ್ಯೋದಯಕ್ಕೆ ಮುನ್ನವೇ ವೆಂಕಟೇಶ, ನರಸಿಂಹ, ಶ್ರೀನಿವಾಸ ಅಥವಾ ಶ್ರೀ ರಂಗನಾಥ ಕ್ಷೇತ್ರಗಳಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ನಿರ್ವಿುಸಿರುವ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಉದ್ಯಾನನಗರಿಯ ವಿವಿಧ ವಿಷ್ಣು ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಆಚರಣೆ ನಡೆಯಲಿದೆ. ಯಾವ ಯಾವ ದೇಗುಲಗಳಲ್ಲಿ ಏನೇನು ವಿಶೇಷ ಎಂಬ ಬಗ್ಗೆ ಪಕ್ಷಿನೋಟ ಇಲ್ಲಿದೆ.
ಒಂದು ಲಕ್ಷ ಲಡ್ಡು ವಿತರಣೆ
ವೈಕುಂಠ ಏಕಾದಶಿ ಪ್ರಯುಕ್ತ ದಕ್ಷಿಣ ಬೆಂಗಳೂರಿನ ಎಲ್ಲ ಶ್ರೀನಿವಾಸ ದೇವಾಲಯಗಳಿಗೆ ಶರವಣ ಚಾರಿಟಬಲ್ ಟ್ರಸ್ಟ್ ಲಡ್ಡು ಪ್ರಸಾದ ವಿತರಿಸಲಿದೆ. 9 ವರ್ಷಗಳಿಂದ ಪ್ರತಿ ವೈಕುಂಠ ಏಕಾದಶಿಗೂ ಒಂದು ಲಕ್ಷ ಲಡ್ಡು ಪ್ರಸಾದ ತಯಾರಿಸಿ ಎಲ್ಲ ಶ್ರೀನಿವಾಸ ದೇವಾಲಯಗಳಿಗೆ ವಿತರಸಲಾಗುತ್ತಿದೆ. ಅದರಂತೆ ಈ ಬಾರಿಯೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಟಿ.ಎ. ಶರವಣ ತಿಳಿಸಿದ್ದಾರೆ.
ಇಸ್ಕಾನ್ ದೇವಾಲಯ- ರಾಜಾಜಿನಗರ
ಸೋಮವಾರ ಬೆಳಗಿನ ಜಾವ 3 ಗಂಟೆಗೆ ಸುಪ್ರಭಾತ ಮತ್ತು ಮಂಗಳಾರತಿ ಸೇವೆ. 3.45ಕ್ಕೆ ಶ್ರೀನಿವಾಸ, ಗೋವಿಂದ ಮಂದಿರದಲ್ಲಿ ಸುಪ್ರಭಾತ. 4ಕ್ಕೆ ಪ್ರಧಾನ ಮಂದಿರದಲ್ಲಿ ಮಂಗಳಾರತಿ. 5ರಿಂದ 5.45ರವರೆಗೆ ವೈಕುಂಠ ದ್ವಾರಕ್ಕೆ ಶ್ರೀ ಲಕ್ಷ್ಮೀನಾರಾಯಣ ಅಲಂಕಾರದಲ್ಲಿ ಶ್ರೀ ರಾಧಾಕೃಷ್ಣಚಂದ್ರರ ಪಲ್ಲಕ್ಕಿ ಉತ್ಸವ. 5.45ಕ್ಕೆ ವೈಕುಂಠ ದ್ವಾರ ಪೂಜೆ, ಸಂಗೀತ ಉತ್ಸವ. 8.45ಕ್ಕೆ ಪುಷ್ಪಾಂಜಲಿ ಸೇವೆ. ಬೆಳಗ್ಗೆ 7.30ರಿಂದ ರಾತ್ರಿ 8ರವರೆಗೆ ಕಲ್ಯಾಣ ಉತ್ಸವಗಳು. ರಾತ್ರಿ 11ರವರೆಗೆ ಸಾರ್ವಜನಿಕರಿಗೆ ಉಚಿತ ದರ್ಶನ. 11.05ಕ್ಕೆ ಶಯನೋತ್ಸವ.