ಸಿಸಿಲಿಯೊಳಗೆ 'ಭದ್ರ' ಲೋಕ ಭವಿಷ್ಯ

Strong Room
ಉಡುಪಿಯ ಸೇಂಟ್​ ಸಿಸಿಲಿ ಸ್ಕೂಲ್​ನ ಸ್ಟ್ರಾಂಗ್​ ರೂಮ್​ನಲ್ಲಿ ಇವಿಎಂ ಹಾಗೂ ವಿವಿಪ್ಯಾಟ್​ಅನ್ನು ಮತಗಟ್ಟೆವಾರು ಇಟ್ಟಿರುವುದನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪರಿಶೀಲಿಸಿದರು.
Published on

ಎಂಟು ಕ್ಷೇತ್ರಗಳ ಮತಯಂತ್ರಗಳಿಗೆ ಸರ್ಪಗಾವಲು -- ಮೂರು ಪಾಳಿಯಲ್ಲಿ ಪೊಲೀಸ್​ ಕರ್ತವ್ಯ

ಪ್ರಶಾಂತ ಭಾಗ್ವತ, ಉಡುಪಿ
ಉಡುಪಿ&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 1,842 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಾಕ್ಷ್ಯವಾದ ಎಲ್ಲ ಮತಯಂತ್ರ (ಇವಿಎಂ) ಹಾಗೂ ಮತದಾನದ ಖಚಿತತೆಯ ವಿವಿ ಪ್ಯಾಟ್​ಗಳು ಉಡುಪಿಯ ಸೇಂಟ್​ ಸಿಸಿಲಿ ಇಂಗ್ಲಿಷ್​ ಮೀಡಿಯಂ ಹೈಯರ್​ ಪ್ರೈಮರಿ ಸ್ಕೂಲ್​ನ ಭದ್ರತಾ ಕೊಠಡಿಯಲ್ಲಿ ಜಮಾಗೊಂಡಿದೆ.
ಮತದಾನದ ದಿನವಾದ ಏ.26ರಂದು ಸಂಜೆಯೇ ಅನೇಕ ಮತಗಟ್ಟೆಗಳ ಮತಯಂತ್ರ ಉಡುಪಿ ತಲುಪಿರಲಿಲ್ಲ. ಶನಿವಾರ ಮಧ್ಯಾಹ್ನದ ನಂತರ ಚಿಕ್ಕಮಗಳೂರು ಜಿಲ್ಲೆಯ 976 ಮತಗಟ್ಟೆಗಳ ಮತಯಂತ್ರಗಳು ಪೊಲೀಸ್​ ಭದ್ರತೆಯಲ್ಲಿ ಲಾರಿಗಳಲ್ಲಿ ಬಂದು ತಲುಪಿವೆ.

ಜಿಲ್ಲಾ ಚುನಾವಣಾಧಿಕಾರಿ ನೇತೃತ್ವ

ಶನಿವಾರ ಬೆಳಗ್ಗೆಯಿಂದ ಭದ್ರತಾ ಕೊಠಡಿಗಳಲ್ಲಿ ಮತಯಂತ್ರಗಳನ್ನು ಇಡುವ ಕಾರ್ಯ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ನೇತೃತ್ವದಲ್ಲಿ ನಡೆಯಿತು. ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಮತಯಂತ್ರ ಹಾಗೂ ವಿವಿ ಪ್ಯಾಟ್​ ಒಟ್ಟಿಗೆ ಹೊಂದಿಸಿ ಇಡಲಾಯಿತು. ಬಳಿಕ ಕೊಠಡಿಯ ಬಾಗಿಲಿಗೆ ಕೀಲಿ ಹಾಕಿ, ಸೀಲ್​ ಮಾಡಲಾಯಿತು. ಎಲ್ಲ ಕೊಠಡಿಯ ಕಿಟಕಿ ಹಾಗೂ ಬಾಗಿಲುಗಳಿಗೆ ದಪ್ಪ ಕಾರ್ಡ್​ಬೋರ್ಡ್​ ಅಳವಡಿಸಿ, ಅಡ್ಡಪಟ್ಟಿ ಹಾಕಿ, ಮೊಳೆ ಹೊಡೆದು ಗಾಳಿಯೂ ಒಳ ಹೋಗದಂತೆ ಭದ್ರತೆ ಮಾಡಲಾಯಿತು.

ಸ್ಟ್ರಾಂಗ್​ ರೂಮ್​ನ ಸುತ್ತ ಸಿಸಿ ಕ್ಯಾಮರಾ

ಸ್ಟ್ರಾಂಗ್​ ರೂಮ್​ನ ಸುತ್ತ ಕ್ಯಾಮರಾ ಅಳವಡಿಸಲಾಗಿದ್ದು, ಎಲ್ಲ ಚಟುವಟಿಕೆಗಳನ್ನು ವೀಸಲಾಗುತ್ತಿದೆ. ಶಾಲೆಯ ಗೇಟ್​ನ ಹೊರಗೆ ರಸ್ತೆಯ ಪಕ್ಕದ ವಿದ್ಯುತ್​ ಕಂಬಕ್ಕೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಒಳ-ಹೊರಗೆ ಹೋಗುವ ಜನರ ಮಾಹಿತಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಗೇಟ್​ನಲ್ಲಿ ನೋಂದಣಿ ಬುಕ್​ ಇಡಲಾಗಿದ್ದು, ಒಳಗೆ ಹೋಗುವ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಯಾರೇ ಬಂದರೂ ಸಹ ಹೆಸರು, ಸಮಯ ಮೊಬೈಲ್​ ನಂಬರ್​ ದಾಖಲಿಸಿಕೊಂಡು, ಲೋಹಶೋಧಕದ ಮೂಲಕ ಪರಿಶೀಲಿಸಿ ಬಿಡಲಾಗುತ್ತಿದೆ.

ಅಭ್ಯರ್ಥಿ ಹಣೆಬರಹಕ್ಕೆ ಬಿಗಿ ಕಾವಲು

ಸೇಂಟ್​ ಸಿಸಿಲಿ ಶಾಲೆಯೊಳಗಿನ ಸ್ಟ್ರಾಂಗ್​ ರೂಮ್​ನಲ್ಲಿ ಇದೀಗ ಮತದಾರರು ಬರೆದ 10 ಅಭ್ಯರ್ಥಿಗಳ ಭವಿಷ್ಯ ಬಂಧಿಯಾಗಿದ್ದು, ಪೊಲೀಸ್​ ಕಾವಲು ಹಾಕಲಾಗಿದೆ. ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಸ್ಟ್ರಾಂಗ್​ ರೂಮ್​ನ ಮೊದಲ ಹಂತದಲ್ಲಿ ಸೆಂಟರ್​ ಆರ್ಮ್ಡ್ ಪೊಲೀಸ್​ಫೋರ್ಸ್ (ಸಿಎಪಿಎಫ್​), ಎರಡನೇ ಹಂತದಲ್ಲಿ ಜಿಲ್ಲಾ ಸಶಸ್ತ್ರ ದಳ, ಮೂರನೇ ಹಂತದಲ್ಲಿ ಜಿಲ್ಲೆಯ ಪೊಲೀಸರು ಮತ್ತು ಕೆಎಸ್​ಆರ್​ಪಿ ತಂಡ ಭದ್ರತೆ ನೀಡಲಿದೆ. ಸಿಸಿಲಿ ಶಾಲೆಯ ಸುತ್ತ ಸೆಕ್ಷನ್​ ಜಾರಿ ಮಾಡಲಾಗಿದ್ದು, ಹದ್ದಿನ ಕಣ್ಣು ಇಡಲಾಗಿದೆ. ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ನೇತೃತ್ವದಲ್ಲಿ ಭದ್ರತಾ ತಂಡ ರಚಿಸಲಾಗಿದೆ. ಸಿಪಿಐ-1, ಎಸ್​ಐ-2, ಜಿಲ್ಲಾ ಪೊಲೀಸ್​-30, 24 ಸಿಬ್ಬಂದಿ ಇರುವ ಜಿಲ್ಲಾ ಸಶಸ್ತ್ರ ದಳದ ಒಂದು ತಂಡ, 32 ಸಿಬ್ಬಂದಿ ಇರುವ ಸಿಆರ್ ಪಿಎಫ್ ​ಒಂದು ತಂಡ ಸೇರಿ ಒಟ್ಟು 90 ಸಿಬ್ಬಂದಿ ಭದ್ರತೆಗೆ ನೇಮಿಸಲಾಗಿದೆ.

8 ವಿಧಾನಸಭಾ ಕ್ಷೇತ್ರಗಳ ಇವಿಎಂ ಹಾಗೂ ವಿವಿಪ್ಯಾಟ್​ಗಳನ್ನು ಸಿಸಿಲಿ ಸ್ಕೂಲ್​ನ 32 ಕೊಠಡಿಗಳಲ್ಲಿ ಲೈವ್​ ವೆಬ್​ಕಾಸ್ಟಿಂಗ್​ ಮೂಲಕ ಭದ್ರತಾ ಕೊಠಡಿಯಲ್ಲಿ ಇಟ್ಟು, ಸಿಎಪಿಎಫ್​ ಪೊಲೀಸರಿಗೆ ಶಾಲೆಯನ್ನೇ ಹಸ್ತಾಂತರಿಸಲಾಗಿದೆ. 16 ಕೊಠಡಿಯಲ್ಲಿ ಇವಿಎಂ, ತಲಾ 8 ಕೊಠಡಿಗಳಲ್ಲಿ ಶಾಸನ ಬದ್ಧ ಹಾಗೂ ಶಾಸನಬದ್ಧವಲ್ಲದ ದಾಖಲೆ ಇಡಲಾಗಿದೆ. ಮತಗಟ್ಟೆವಾರು ಸಿಯು, ಪಿಯು, ವಿವಿಪ್ಯಾಟ್​, ಪಿಆರ್​ಒ ರಿಪೋರ್ಟ್​, ಕಪ್ಪು ಬಣ್ಣದ ಕವರ್​ ಹಾಗೂ 17-ಸಿ ನಮೂನೆ ಇಡಲಾಗಿದೆ. ಡಾ.ಕೆ.ವಿದ್ಯಾಕುಮಾರಿ.ಜಿಲ್ಲಾ ಚುನಾವಣಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net