

ಗಂಗಾವತಿ: ನೀರಿನ ಹರಿವು ಸಾಮರ್ಥ್ಯ ಆಧಾರದಡಿ ವಿಎನ್‌ಸಿ ಆಧುನೀಕರಣ ಕಾಮಗಾರಿಯ ವಿನ್ಯಾಸ ರೂಪಿಸಲಾಗುತ್ತಿದ್ದು, ರೈತರೊಂದಿಗೆ ಚರ್ಚಿಸಲಾಗುವುದು ಎಂದು ತುಂಗಭದ್ರಾ ಜಲಾಶಯ ಮಂಡಳಿ ಮುಖ್ಯ ಇಂಜಿನಿಯರ್ ಮಂಜಪ್ಪ ಹೇಳಿದರು.
ತಾಲೂಕಿನ ಆನೆಗೊಂದಿ ರಸ್ತೆ ಬಳಿ ವಿಜಯನಗರ ಕಾಲುವೆ ಸ್ಥಿತಿಗತಿಯನ್ನು ಮಂಗಳವಾರ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಟ್ಟದಿಂದ ಮಳೆ ನೀರು ಕಾಲುವೆಗೆ ಸೇರುತ್ತಿರುವುದರಿಂದ ಧಕ್ಕೆಯಾಗುತ್ತಿದೆ. ನೀರಿನ ಹರಿವು ಮತ್ತು ಬೆಟ್ಟದ ನೀರು ಸಂಗ್ರಹ ಸಾಮರ್ಥ್ಯದಡಿ ಕಾಲುವೆ ವಿಸ್ತಾರ ರೂಪಿಸಲಾಗುತ್ತಿದ್ದು, ಶಾಶ್ವತ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದರು.
ವಿಎನ್‌ಸಿ ಆಧುನೀಕರಣ ವಿನ್ಯಾಸ ರೂಪಿಸುವಾಗ ರೈತರನ್ನು ಸಂಪರ್ಕಿಸಿಲ್ಲ, ವಾಸ್ತವಿಕ ಸ್ಥಿತಿ ಅಧಿಕಾರಿಗಳು ಪಡೆದಿಲ್ಲ. ವಿನ್ಯಾಸ ದೋಷದಿಂದ ಮಳೆ ನೀರಿಗೆ ಕಾಲುವೆ ಕಿತ್ತಿ ಹೋಗುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದೆ. ಕಾಲುವೆಗೆ ಹರಿಸುವ ನೀರಿಗಿಂತ ಎರಡು ಪಟ್ಟು ಹೆಚ್ಚಿನ ಸಾಮರ್ಥ್ಯದ ಕಾಮಗಾರಿ ನಿರ್ವಹಿಸಿದಾಗ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ಬಗ್ಗೆ ಆನೆಗೊಂದಿ ಮತ್ತು ಗಂಗಾವತಿ ಭಾಗದ ರೈತರೊಂದಿಗೆ ಸಭೆ ನಡೆಸುವಂತೆ ತಾಪಂ ಸದಸ್ಯ ವೈ.ರಮೇಶ, ರೈತರಾದ ಸುದರ್ಶನ ವರ್ಮಾ, ಲಿಂಗಪ್ಪ, ಚಂದ್ರಶೇಖರ್ ರೆಡ್ಡಿ ಒತ್ತಾಯಿಸಿದರು.
ರೈತರೊಂದಿಗೆ ಸಣಾಪುರದಿಂದ ದೇವಘಾಟ್‌ವರೆಗಿನ ವಿಎನ್‌ಸಿಯನ್ನು ವೀಕ್ಷಿಸಿದ ಇಂಜಿನಿಯರ್ ನೇತೃತ್ವದ ತಂಡ, ಕಾಲುವೆ ಸ್ವಚ್ಛತೆ ಕೈಗೊಳ್ಳುವಂತೆ ನಿರ್ವಹಣೆ ಇಂಜಿನಿಯರ್‌ಗೆ ಸೂಚಿಸಿತು.