ಸುಳ್ಯದ ಬುಡಕಟ್ಟು ರೈತರಿಗೆ ಬೆಂಗಳೂರಿನಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ

mng--30 Sep Budakattu
Published on

ಮಂಗಳೂರು: ಅಡಕೆ ಬೆಳೆಗೆ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಐಸಿಎಆರ್-ಐಐಎಚ್‌ಆರ್ ಸಂಸ್ಥೆಯು ಐಸಿಎಆರ್- ಕೆವಿಕೆ ದಕ್ಷಿಣ ಕನ್ನಡ ಸಹಯೋಗದಲ್ಲಿ ಸುಳ್ಯ ತಾಲೂಕಿನ ಆದಿವಾಸಿ ರೈತರಿಗೆ ಹೈ-ಟೆಕ್ ತೋಟಗಾರಿಕೆ ಕುರಿತ ಎರಡು ದಿನಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಐಸಿಎಆರ್-ಐಐಎಚ್‌ಆರ್ ನಿರ್ದೇಶಕ (ಪ್ರಭಾರ) ಡಾ.ಪ್ರಕಾಶ್ ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ರೈತರು ಉತ್ಪಾದನೆ ಮತ್ತು ಆದಾಯ ಹೆಚ್ಚಿಸಲು ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ವಿಜ್ಞಾನಿ (ತರಕಾರಿ ಬೆಳೆಗಳು) ಡಾ. ಟಿ. ಎಚ್. ಸಿಂಗ್ ಮತ್ತು ಪ್ರಧಾನ ವಿಜ್ಞಾನಿ ಡಾ.ವಿ.ಶಂಕರ್ ಟಿಎಸ್‌ಪಿ ಯೋಜನೆ ಸಂಯೋಜಕರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.

ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ ಮುಖ್ಯಸ್ಥ ಡಾ. ಸೆಂತಿಲ್ ಕುಮಾರ್ ಅವರು, ತರಕಾರಿ ಬೆಳೆಗಳಲ್ಲಿ ಅರ್ಕ ಮೈಕ್ರೋಬಿಯಲ್ ಕಾಂಸಾರ್ಟಿಯಾ ಬಳಕೆಯ ವಿಧಾನವನ್ನು ಪ್ರದರ್ಶಿಸಿದರು.

ನಿವೃತ್ತ ಪ್ರಧಾನ ವಿಜ್ಞಾನಿ (ವಿಸ್ತರಣೆ) ಡಾ. ವಿ.ಕೆ.ಜೆ. ರಾವ್,ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ, ಕೃಷಿ ಉದ್ಯಮ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಪ್ರಧಾನ ವಿಜ್ಞಾನಿ (ವಿಸ್ತರಣೆ)ಡಾ. ಜಿ. ನಾರಾಯಣ, ಉತ್ಪಾದನೆ ಹಾಗೂ ಉತ್ಪಾದಕತೆ ಸುಧಾರಣೆಗೆ ವೈಜ್ಞಾನಿಕ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.

ಹಿರಿಯ ವಿಜ್ಞಾನಿ (ಮಣ್ಣಿನ ವಿಜ್ಞಾನ) ಡಾ. ಚೇತನ್ ಕುಮಾರ್, ಮಣ್ಣಿನ ಮಾದರಿ ಸಂಗ್ರಹಣೆ ಬಗ್ಗೆ ಮಾಹಿತಿ ನೀಡಿ, ಮಣ್ಣಿನ ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮಾಡುವಂತೆ ತಿಳಿಸಿದರು.

ಡಾ. ವಿ. ಶಂಕರ್ ಕರಾವಳಿ ಕರ್ನಾಟಕಕ್ಕೆ ಸೂಕ್ತ ತರಕಾರಿ ಬೆಳೆಯ ಕುರಿತು ಮಾಹಿತಿ ನೀಡಿ, ರೈತರನ್ನು ಎಟಿಐಸಿ ಕೇಂದ್ರಕ್ಕೆ ಕರೆದೊಯ್ದು ಲಭ್ಯವಿರುವ ತಂತ್ರಜ್ಞಾನಗಳು ಹಾಗೂ ಉತ್ಪನ್ನಗಳ ಬಗ್ಗೆ ತಿಳುವಳಿಕೆ ನೀಡಿದರು.

ಪ್ರಧಾನ ವಿಜ್ಞಾನಿ (ಮಾಹಿತಿ ತಂತ್ರಜ್ಞಾನ) ಡಾ. ರೀನಾ ರೋಸಿ ಥಾಮಸ್, ತಂತ್ರಜ್ಞಾನ, ಬೆಳೆಗಳು ಹಾಗೂ ಸುಧಾರಿತ ಪದ್ಧತಿಗಳ ಮಾಹಿತಿಗಾಗಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಪ್ರದರ್ಶಿಸಿದರು.

ರೈತರು ಎಟಿಐಸಿ ಕೇಂದ್ರ, ಹಣ್ಣು-ತರಕಾರಿ ಸಂಸ್ಕರಣೆ ಘಟಕ, ಅಣಬೆ ಉತ್ಪಾದನಾ ಘಟಕ ನರ್ಸರಿ, ತರಕಾರಿ, ಹಣ್ಣು, ಹೂವಿನ ಪ್ರದರ್ಶನ ತೋಟಗಳು, ಕೊಯಿರ್ ಪಿತ್ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದರು.

ಸುಳ್ಯ ತಾಲೂಕಿನ ಆರು ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾದ ಬುಡಕಟ್ಟು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರಿಗೆ ಪ್ರಮಾಣಪತ್ರ, ಬೀಜ ಕಿಟ್, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಸೂಕ್ಷ್ಮ ಪೋಷಕಾಂಶ ಮಿಶ್ರಣ, ತರಕಾರಿ ಸ್ಪೆಷಲ್ ಹಾಗೂ ತಾಂತ್ರಿಕ ಕೈಪಿಡಿ ವಿತರಿಸಲಾಯಿತು.

ಸುಳ್ಯ ತಾಲೂಕಿನ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ), ಲೋಚನಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಹಿರಿಯ ವಿಜ್ಞಾನಿ ಡಾ.ಟಿ.ಜೆ. ರಮೇಶ ಅವರು ದಕ್ಷಿಣ ಕನ್ನಡ, ಬುಡಕಟ್ಟು ರೈತರ ಸಮಸ್ಯೆಗಳ ಬಗ್ಗೆ ತಿಳಿಸಿ, ಅವರ ಜೀವನೋಪಾಯ ಸುಧಾರಣೆಗೆ ಸಹಕಾರವನ್ನು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net