

ತರೀಕೆರೆ: ಬಸವಣ್ಣನವರ ದೂರದೃಷ್ಟಿ ಸಾಮರ್ಥ್ಯಾಧಾರಿತ ತೆರಿಗೆಯೇ ಇಂದಿನ ಸಮ ಸಮಾಜದ ಬಜೆಟ್‌ಗೆ ತಳಹದಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೋ.ಬಿ.ಈ.ಕುಮಾರಪ್ಪ ಹೇಳಿದರು.
ಎಸ್‌ಜೆಎಂ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಐಕ್ಯೂಎಸಿ ಘಟಕ ಮತ್ತು ಅಮರ್ತ್ಯ ಸೆನ್ ಅರ್ಥಶಾಸ ವೇದಿಕೆಯಿಂದ ಏರ್ಪಡಿಸಿದ್ದ ಕೇಂದ್ರ ಮತ್ತು ರಾಜ್ಯ ಮುಂಗಡ ಪತ್ರ ವಿಶ್ಲೇಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆರಿಗೆಯ ವಿವಿಧ ಮೂಲಗಳು, ಘಟಕಾಂಶಗಳು, ವೆಚ್ಚದ ಮೂಲಗಳು, ವಿತ್ತೀಯ ಕೊರತೆಯ ಅನಿವಾರ್ಯತೆ ಇವಗಳು ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾಗಿವೆ. ಅಶಕ್ತರಿಗೆ ಶಕ್ತಿ ತುಂಬುವ ಯೋಜನೆ ಮೂಲಕ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಮೂಲಕ 12ನೇ ಶತಮಾನದ ಬಸವಣ್ಣನವರ ದೂರದೃಷ್ಟಿ ಸಾಮರ್ಥ್ಯಾಧಾರಿತ ತೆರಿಗೆಯೇ ಇಂದಿನ ಸಮ ಸಮಾಜದ ಬಜೆಟ್‌ಗೆ ತಳಹದಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜತೆಗೂಡಿ ಕಾರ್ಯ ಪ್ರವೃತ್ತರಾಗಿರುವುದು ಬಲಿಷ್ಠ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ಪ್ರಾಚಾರ್ಯ ಡಾ.ಕೆ.ಜಿ.ಚವ್ಹಾಣ್ ಮಾತನಾಡಿ, ಪ್ರತಿಯೊಂದು ಮನೆಗೂ ಮುಂಗಡ ಪತ್ರದ ಅರಿವು ಅವಶ್ಯ. ಆದಾಯಕ್ಕೆ ತಕ್ಕಂತೆ ವೆಚ್ಚ ಮಾಡಿದಾಗ ಮಾತ್ರ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಇಂಥ ಕಾರ್ಯಕ್ರಮ ಅರ್ಥ ಪೂರ್ಣವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಮಹಮ್ಮದ್ ದಸ್ತಗಿರ್ ಕೇಂದ್ರ ಬಜೆಟ್, ಪಿ.ಅರುಣ ರಾಜ್ಯ ಬಜೆಟ್ ಹಾಗೂ ಉಮ್ಮೆ ರುಖಯ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮುಂಗಡ ಪತ್ರ ಕುರಿತು ಪ್ರಬಂಧ ಮಂಡಿಸಿದರು. ಉಪನ್ಯಾಸಕರಾದ ಪ್ರೋ.ಕೆ.ಶಿವರಾಜಕುಮಾರ, ನೇತ್ರಾವತಿ, ಐಕ್ಯೂಎಸಿ ಕೋ ಆರ್ಡಿನೇಟರ್ ಡಾ.ಎ.ಸದಾಶಿವನಾಯ್ಕ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜೆ.ರಘು ಮತ್ತಿತರರಿದ್ದರು.