ಪಾವಗಡ ಆಸ್ಪತ್ರೆಗೆ ಬೇಕು ಚಿಕಿತ್ಸೆ! ; ಗಡಿಗ್ರಾಮಗಳಲ್ಲಿ ಮಕ್ಕಳಿಗೆ ಸೋಂಕು? ; ಹಳ್ಳಿಗಳಿಗೆ ವ್ಯಾಪಿಸಿದ ಕರೊನಾ

23TMK_PVG_Hosptl 1
Published on

ಪಾವಗಡ : ತಾಲೂಕಿನೆಲ್ಲೆಡೆ ಕರೊನಾ ಮಹಾಸ್ಫೋಟವಾಗಿದ್ದು, 733 ಸಕ್ರಿಯ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿವೆ. ಆದರೆ, ವಾಸ್ತವಲ್ಲಿ ತಾಲೂಕಿನ ಪ್ರತಿಗ್ರಾಮದಲ್ಲಿತೂ ಶೀತ ಜ್ವರ, ಕೆಮ್ಮು, ನೆಗಡಿ, ಮೈ ಕೈನೋವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ತಾಲೂಕಿನಲ್ಲಿ ನೂರಾರು ಮಕ್ಕಳಿಗೂ ಕರೊನಾ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ನೆರೆಯ ಆಂಧ್ರದ ಮಡಕಶಿರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿದೆ. ಕರ್ನಾಟಕದ ರೋಗಿಗಳಿಗೆ ಕರೊನಾ ಪರೀಕ್ಷೆ ಇಲ್ಲದೆ ಆಂಧ್ರದಲ್ಲಿ ಚಿಕಿತ್ಸೆ ನೀಡುತ್ತಿರುವ ಕಾರಣಕ್ಕೆ ನಮ್ಮಲ್ಲಿ ಸಂಖ್ಯೆ ಕಡಿಮೆ ತೋರಿಸಲಾಗುತ್ತಿದೆ ಆದರೆ, ಹಳ್ಳಿಗಳಲ್ಲಿ ಸೂಕ್ತ ಜಾಗೃತಿ ಇಲ್ಲದೆ ಸೋಂಕು ಹರುತ್ತಲೇ ಇದೆ.

ಪಾವಗಡ ತಾಲೂಕು ಆಸ್ಪತ್ರೆಯಲ್ಲಿ 10 ತಜ್ಞ ವೈದ್ಯರಿದ್ದು ಒಂದು ಹುದ್ದೆ ಮಾತ್ರ ಖಾಲಿಯಿದೆ. ಈ ಕರೊನಾ ಸಂಕಷ್ಟದಲ್ಲಿ ಮೂಳೆ ತಜ್ಞ ಡಾ.ರಮೇಶ್ ಅನಧಿಕೃತವಾಗಿ ಗೈರುಹಾಜರಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಎಕ್ಸರೇ ಟೆಕ್ನಿಶಿಯನ್ ಒಬ್ಬರೇ ಇದ್ದು ಅವರು ರಜೆ ಪಡೆದರೆ ಕೇಂದ್ರವನ್ನೇ ಮುಚ್ಚಲಾಗುತ್ತಿದ್ದು ಬಡವರ ಕಷ್ಟ ಹೇಳತೀರದಾಗಿದೆ.

ತಾಲೂಕು ಆಸ್ಪತ್ರೆ ಹಳೆಯ ಕಟ್ಟಡದಲ್ಲಿದ್ದು, ಯುಜಿಡಿ ಸಮಸ್ಯೆ ವೈದ್ಯರ ನೆಮ್ಮದಿ ಕೆಡಿಸಿದೆ, ಆಸ್ಪತ್ರೆಗೆ ಪ್ರತ್ಯೇಕವಾಗಿ ಸೀವೆಜ್ ಟ್ರೀಟ್ಮೆಂಟ್ ಪ್ಲಾಂಟ್ ಅಗತ್ಯವಿದೆ. ಶಸ್ತ್ರಚಿಕಿತ್ಸೆ, ಒಪಿಡಿ ಕೊಠಡಿ ಸಂಫೂರ್ಣ ಶಿಥಲವಾಗಿದ್ದು ಕಳಚಿಬೀಳುವ ಸ್ಥಿತಿಯಲ್ಲಿದೆ. ಸೀಟಿ ಸ್ಕಾೃನ್ ಯಂತ್ರದ ಅಗತ್ಯವಿದೆ. ತಾಲೂಕಿನಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 2 ಸಮುದಾಯ ಆರೋಗ್ಯ ಕೇಂದ್ರವಿದ್ದು, ಎಲ್ಲೆಡೆಯೂ ವೈದ್ಯರಿದ್ದಾರೆ. ಆದರೆ, ಜನರಿಗೆ ಚಿಕಿತ್ಸೆ ಮಾತ್ರ ಲಭ್ಯವಾಗುತ್ತಿಲ್ಲ. ಬಹುತೇಕ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಅಲ್ಲಿಗೆ ಬನ್ನಿ ಎಂದು ಹೇಳಿ ಕರೆಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಮಕ್ಕಳಿಗಾಗಿ ಹತ್ತು ಹಾಸಿಗೆ, ಒಬ್ಬರೂ ಚಿಕಿತ್ಸೆ ಪಡೆದಿಲ್ಲ! : ತಾಲೂಕಿನಲ್ಲಿ ನೂರಾರು ಮಕ್ಕಳು ಕರೊನಾ ಲಕ್ಷಣಗಳಿಂದ ಬಳಲುತಿದ್ದರೂ ತಾಲೂಕು ಆಸ್ಪತ್ರೆಗೆ ಬಂದು ಯಾವ ಮಕ್ಕಳಿಗೂ ಚಿಕಿತ್ಸೆ ಪಡೆಯುತ್ತಿಲ್ಲ. ಮಕ್ಕಳಿಗಾಗಿ 10 ಹಾಸಿಗೆ ಮೀಸಲಿಡಲಾಗಿದ್ದು, ಐವತ್ತು ಹಾಸಿಗೆಗೆ ಸಾಕಾಗುವಷ್ಟು ಆಮ್ಲಜನಕ ಕೂಡ ಲಭ್ಯವಿದೆ. ಪಾವಗಡ ತಾಲೂಕು ಆಸ್ಪತ್ರೆ ಚಿಕಿತ್ಸೆ ಬಗ್ಗೆ ನಂಬಿಕೆ ಕಳೆದುಕೊಂಡಿರುವ ತಾಲೂಕಿನ ಜನರು ಮಕ್ಕಳನ್ನು ಇಲ್ಲಿಗೆ ಕರೆತರುವ ಸಾಹಸ ಮಾಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಪರೀಕ್ಷೆ ಇಲ್ಲದೆ ಚಿಕಿತ್ಸೆ ನೀಡಿ ಕಳುಹಿಸುತ್ತಿರುವುದು ಹಳ್ಳಿಗಳಲ್ಲಿ ಮಕ್ಕಳಿಗೆ ಸೋಂಕು ಹರಡಲು ಪ್ರಮುಖ ಕಾರಣವಾಗಿದೆ.

ತಾಲೂಕಿನಲ್ಲಿ 100ಕ್ಕೂ ಹೆಚ್ಚು ಮಕ್ಕಳಲ್ಲಿ ಕರೊನಾ ಸೋಂಕು ದೃಢವಾಗಿದ್ದು, ಯಾವ ಮಕ್ಕಳೂ ಆಸ್ಪತ್ರೆಗೆ ದಾಖಲಾಗಿಲ್ಲ. 50 ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ನಮ್ಮಲ್ಲಿ ಸಾಧ್ಯವಿದ್ದು ಔಷಧ, ಆಮ್ಲಜನಕ ಸೇರಿ ಯಾವುದೇ ಕೊರತೆಯಿಲ್ಲ. ಡಾ.ಕಿರಣ್‌ಕುಮಾರ್ ಮಕ್ಕಳ ತಜ್ಞ, ಪಾವಗಡ ತಾಲೂಕು ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net