ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ದುಸ್ಥರ

26mdk04
Published on

ಮಡಿಕೇರಿ:
ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯುವವರನ್ನು ನಿರ್ಧರಿಸುವ ಮಹತ್ವದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ರಾಜಕೀಯ ಪಕ್ಷಗಳ ಪ್ರಮುಖರು ಒಂದು ಕಡೆಯಲ್ಲಿ ರ‌್ಯಾಲಿ, ರೋಡ್‌ಶೋ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕಾರ್ಯಕರ್ತರು ಮತದಾರರನ್ನು ವ್ಯಯಕ್ತಿಕವಾಗಿ ಭೇಟಿ ಮಾಡಿ ವೋಟ್‌ಗಾಗಿ ಮನವೊಲಿಸುವುದನ್ನು ಮುಂದುವರಿಸಿದ್ದಾರೆ. ಕೊಡಗಿನಲ್ಲೂ ಇಂತಹ ಚಟುವಟಿಕೆ ನಡೆಯುತ್ತಿದ್ದರೂ ಇಲ್ಲಿ ಮನೆ ಮನೆಗೆ ತೆರಳಿ ಮತ ಕೇಳುವುದು ಅಷ್ಟು ಸುಲಭವೇನಲ್ಲ.

ಮಲೆನಾಡಿನ ಸೆರಗಿನಲ್ಲಿರುವ ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿರುವ ಪುಟ್ಟ ಜಿಲ್ಲೆ. ಇಲ್ಲಿಯ ಪಟ್ಟಣ ಪ್ರದೇಶಗಳು ಹೊರತುಪಡಿಸಿದರೆ ಬೇರೆ ಜಿಲ್ಲೆಗಳಂತೆ ಇಲ್ಲಿ ಗುಂಪು ಮನೆಗಳು ಕಡಿಮೆ. ಸೋಮವಾರಪೇಟೆ, ಕುಶಾಲನಗರ ತಾಲೂಕಿನಲ್ಲಿ ಮಾತ್ರ ಕೆಲವು ಕಡೆ ಹಳ್ಳಿಗಳಲ್ಲಿ ಒಟ್ಟೊಟ್ಟಿಗೆ ಮನೆಗಳಿವೆ. ಇದನ್ನು ಹೊರತುಪಡಿಸಿದರೆ ಕಾಲೋನಿಗಳಲ್ಲಿ ಗುಂಪು ಮನೆಗಳನ್ನು ಕಾಣಬಹುದು. ಹಾಡಿಗಳಲ್ಲಿ ಮೀಟರ್‌ಗಳ ಅಂತರದಲ್ಲಿ ಗುಡಿಸಲುಗಳು ನೋಡಲು ಸಿಗುತ್ತದೆ.

ಮಡಿಕೇರಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಪರಿಸ್ಥಿತಿ ಸಾಕಷ್ಟು ಭಿನ್ನವಾಗಿದೆ. ಇಲ್ಲಿ ಒಂಟಿ ಮನೆಗಳ ಸಂಖ್ಯೆಯೇ ಹೆಚ್ಚು. ಒಂದು ಮನೆಯಿಂದ ಮತ್ತೊಂದು ಮನೆಗೆ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ರಮಿಸಬೇಕಾದ ಪ್ರದೇಶವೂ ಇದೆ. ಕಾಫಿ ತೋಟ ಸೇರಿದಂತೆ ತಮ್ಮ ಸ್ವಂತ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವವರ ಸಂಖ್ಯೆಯೇ ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಂದು ಗ್ರಾಮದಲ್ಲಿ ಸಾಮಾನ್ಯವಾಗಿ ನೂರು ಮನೆಗಳು ಇದ್ದರೆ ಅವು ನೂರು ಕಡೆಗಳಲ್ಲಿ ಹರಡಿರುತ್ತದೆ.
ಜಿಲ್ಲೆಯ ಕೆಲವೊಂದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಸುಮಾರು ೧೫ ಸಾವಿರಕ್ಕೂ ಅಧಿಕ ಎಕರೆ ಪ್ರದೇಶದ ವ್ಯಾಪ್ತಿ ಹೊಂದಿರುತ್ತವೆ. ಆದರೆ ೧೦೦೦-೧೧೦೦ ಕುಟುಂಬಗಳು ಇಲ್ಲಿಬ ವಾಸ ಮಾಡುತ್ತಿರುತ್ತದೆ. ಇದರಿಂದಲೇ ಮನೆಗಳ ದಟ್ಟಣೆ ಎಷ್ಟು ಕಡಿಮೆ ಇರುತ್ತದೆ ಎನ್ನುವುದನ್ನು ಊಹಿಸಿಕೊಳ್ಳಬಹುದು. ತೋಟ, ಗದ್ದೆಗಳಲ್ಲಿ ಮಾತ್ರವಲ್ಲದೆ ಬೆಟ್ಟ-ಗುಡ್ಡಗಳ ಮೇಲಿರುವ ಸ್ವಂತ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುವವರೂ ಇಲ್ಲಿದ್ದಾರೆ. ಕೆಲವು ಮನೆಗಳಂತೂ ವಾಹನ ಕೂಡ ಹೋಗಲು ಆಗದ ಕಡಿದಾದ ಪ್ರದೇಶದಲ್ಲಿ ಇರುತ್ತದೆ.

ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ೧೦-೨೦ ಮತಗಳಿಗಾಗಿ ದಿನಕ್ಕೆ ಕನಿಷ್ಠ ೧೦ ಕಿಮೀ ದೂರ ನಡೆಯಬೇಕಾಗುತ್ತದೆ. ಒಂದು ಮನೆ ನದಿ ಬದಿಯ ಗದ್ದೆ ಬಯಲಿನಲ್ಲಿದ್ದರೆ ಮತ್ತೊಂದು ಮನೆ ಬೆಟ್ಟದ ಮೇಲಿನ ಕಾಫಿ ತೋಟದಲ್ಲಿ ಇರುತ್ತದೆ. ಅಣ್ಣನ ಮನೆ ತೋಟದ ಒಂದು ಮೂಲೆಯಲ್ಲಿದ್ದರೆ, ತಮ್ಮನ ಮನೆ ಮತ್ತೊಂದು ಮೂಲೆಯಲ್ಲಿ ಇರುತ್ತದೆ. ಮತದಾರನ ಮನ ಗೆದ್ದು ಮತ ಗಿಟ್ಟಿಸಬೇಕೆಂದರೆ ಕಾರ್ಯಕರ್ತ ಇಲ್ಲೆಲ್ಲಾ ಸುತ್ತಾಡಲೇ ಬೇಕಾಗುತ್ತದೆ. ಚುನಾವಣೆ ಮುಗಿಯುವ ವೇಳೆಗೆ ಸ್ಥಳೀಯ ನಾಯಕರು, ಕಾರ್ಯಕರ್ತರು ನಡೆದಾಡಿಯೇ ಸುಸ್ತಾಗಿಬಿಟ್ಟಿರುತ್ತಾರೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net