

ಮಡಿಕೇರಿ:
ಮಲೆನಾಡು ಕೊಡಗಿನಲ್ಲೂ ಬಿಸಿಲಿನ ಧಗೆ ನೆತ್ತಿ ಸುಡುವಂತಿದ್ದು ಚುನಾವಣಾ ಪ್ರಚಾರದ ಮೇಲೆ ನೇರ ಪರಿಣಾಮ ಬೀರಿದೆ. ಹಗಲಿನಲ್ಲಿ ಮನೆಮನೆಗೆ ತೆರಳಿ ಮತಬೇಟೆ ನಡೆಸುವುದು ಈಗಿನ ಸಂದರ್ಭದಲ್ಲಿ ಅಕ್ಷರಶಃ ಬೆವರಿಳಿಸುವಂತಿದೆ. ಹಾಗಾಗಿ ಬಹುತೇಕ ರಾಜಕೀಯ ಪ್ರಮುಖರು ಬೆಳ್ಳಂಬೆಳಗ್ಗೆ ಅಥವಾ ಸೂರ್ಯ ಮುಳುಗಿದ ನಂತರ ಜನರ ಬಳಿಗೆ ತೆರಳುತ್ತಿದ್ದಾರೆ.
ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಗೆಲುವಿಗಾಗಿ ಈ ಬಾರಿ ಬೆವರು ಹರಿಸಲೇಬೇಕಿದೆ. ಜಿಲ್ಲೆಯಲ್ಲಿ ಸರಾಸರಿ ೩೬ ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಬಿಸಿಲು ಮತ ಬೇಟೆಗೆ ಇಳಿದವರನ್ನು ಹೈರಾಣಾಗಿಸಿದೆ. ಈ ಹಿಂದಿನ ಚುನಾವಣೆಗಳ ಸಂದರ್ಭದಲ್ಲೂ ಈ ಮಾದರಿಯಲ್ಲಿ ಪ್ರಖರ ಬಿಸಿಲು ಇದ್ದರೂ ಆಗಾಗ್ಗೆ ಮಳೆರಾಯ ಕೃಪೆ ತೋರಿ ಭೂಮಿಯನ್ನು ತಂಪು ಮಾಡುತ್ತಿದ್ದ ಕಾರಣ ಹಗಲಿನ ಪ್ರಚಾರ ರಾಜಕೀಯ ಪಕ್ಷಗಳ ಪ್ರಮುಖರಿಗೆ, ಕಾರ್ಯಕರ್ತರಿಗೆ ತ್ರಾಸದಾಯಕ ಅನ್ನಿಸುತ್ತಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಕೊಡಗಿನ ಅಲ್ಲಲ್ಲಿ ಮಳೆ ಆಗುತ್ತಿದ್ದರೂ ಹಗಲಿನಲ್ಲಿ ತಂಪಿನ ವಾತಾವರಣ ಕಂಡುಬರುತ್ತಿಲ್ಲ. ಸುಡುವ ಬಿಸಿಲು, ಮೈ ತೋಯಿಸುವ ಬೆವರಿನ ಜತೆಯಲ್ಲೇ ಪ್ರಚಾರ ಕಾರ್ಯ ನಡೆಸುವ ಅನಿವಾರ್ಯತೆ ಬಂದೊದಗಿದೆ.
ಮತದಾನಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ. ಹಾಗಾಗಿ ಉಳಿದಿರುವ ಅಲ್ಪ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಮತದಾರರನ್ನು ತಲುಪಿ ಮತಯಾಚನೆ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಯೋಜನೆ ರೂಪಿಸಿದ್ದರೂ. ಬಿಸಿಲಿನ ತಾಪದಿಂದಾಗಿ ಇದು ಕಾರ್ಯರೂಪಕ್ಕೆ ಬರಲು ಅಡ್ಡಿಯಾಗುತ್ತಿದೆ. ಕಾರ್ಪೊರೇಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೊಡುತ್ತಿರುವ ದೈನಂದಿನ ಟಾಸ್ಕ್‌ಗಳ ಗುರಿ ಮುಟ್ಟಲು ಕೂಡ ಬಿಸಿಲಿನ ತಾಪದಿಂದಾಗಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಹಗಲಿನಲ್ಲಿ ಚುನಾವಣಾ ಪ್ರಚಾರ ನಡೆಸುವವರು ನೆರಳಿಗಾಗಿ ಟೋಪಿ, ಕೊಡೆಗಳು, ತಮ್ಮ ಪಕ್ಷಗಳ ಶಲ್ಯಗಳನ್ನೇ ಆಶ್ರಯಿಸುವುದು ಸಾಮಾನ್ಯವಾಗಿದೆ.
ಹಗಲಿನಲ್ಲಿ ಮನೆ ಮನೆ ಭೇಟಿಗಿಂತ ಬೆಳಗ್ಗೆ ಅಥವಾ ಸಂಜೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡರೆ ಸೂಕ್ತ ಎನ್ನುವ ನಿರ್ಧಾರಕ್ಕೆ ಕೆಲವು ಪ್ರಮುಖರು ಬಂದಿದ್ದಾರೆ. ಇದರಿಂದಾಗಿ ಸೂರ್ಯ ತಾಪದಿಂದ ತಪ್ಪಿಸಿಕೊಳ್ಳುವುದರ ಜತೆಗೆ ಮತದಾರರ ಭೇಟಿಯೂ ಸುಲಭವಾಗುತ್ತದೆ. ಈ ಸಮಯದಲ್ಲಿ ಬಹುತೇಕರು ಮನೆಯಲ್ಲಿ ಇರುತ್ತಾರೆ. ಹಾಗಾಗಿ ಕುಟುಂಬದ ಎಲ್ಲಾ ಸದಸ್ಯರನ್ನು ಒಟ್ಟಿಗೆ ಮಾತನಾಡಿಸಬಹುದು. ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ವಿವರವಾಗಿ ಹೇಳಿಕೊಳ್ಳಲು ಅವಕಾಶ ಸಿಗುತ್ತದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.
ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ಮುಂಜಾನೆ ಮತ್ತು ಸಂಜೆಯ ಮನೆ ಮನೆ ಪ್ರಚಾರ ಕಷ್ಟ. ತೋಟ, ಗದ್ದೆಗಳ ಮಧ್ಯೆ ಅಲ್ಲೊಂದು, ಇಲ್ಲೊಂದು ಇರುವ ಮನೆಗಳು, ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ಭಯ, ದಟ್ಟ ಕಾಡು ಈ ರೀತಿಯ ಪ್ರಚಾರಕ್ಕೆ ದೊಡ್ಡ ಅಡ್ಡಿಯಾಗಿದೆ. ಇಂತಹ ಪ್ರದೇಶಗಳಲ್ಲಿ ಹಗಲಿನಲ್ಲೇ ಅನಿವಾರ್ಯವಾಗಿ ಬಿಸಿಲಿನಿಂದ ರಕ್ಷಣೆ ಪಡೆದುಕೊಂಡು ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ತಮ್ಮ ಪಕ್ಷ ಮತ್ತು ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಹಗಲಲ್ಲಿ ಶ್ರಮ ಹಾಕುತ್ತಾ ತಮ್ಮ ಬದ್ಧತೆ ಪ್ರದರ್ಶಿಸುತ್ತಿದ್ದಾರೆ.
ಸೋಮವಾರಪೇಟೆ ತಾಲೂಕಿನ ಬಹುಭಾಗ ಮತ್ತು ಕುಶಾಲನಗರ ತಾಲೂಕಿನಲ್ಲಿ ಬಯಲು ಪ್ರದೇಶದ ವಾತಾವರಣ ಇರುವುದರಿಂದ ಹಗಲಿನಲ್ಲಿ ಮನೆ ಮನೆ ಪ್ರಚಾರ ಬಹಳ ಕಷ್ಟ. ಆದರೆ ಇಲ್ಲಿ ಮುಂಜಾನೆ ಮತ್ತು ಇಳಿ ಸಂಜೆಯಲ್ಲಿ ಸುಲಭವಾಗಿ ಮನೆ ಮನೆ ಪ್ರಚಾರ ನಡೆಸಬಹುದು. ಹಾಗಾಗಿ ಈ ಭಾಗದಲ್ಲಿ ಪಕ್ಷಗಳ ಕಾರ್ಯಕರ್ತರು, ಮುಖಂಡರು ಇಂತಹ ಸಮಯದಲ್ಲೇ ಹೆಚ್ಚಾಗಿ ಪ್ರಚಾರ ಕಾರ್ಯ ನಡೆಸುವುದು ಕಂಡುಬರುತ್ತಿದೆ.
ಪ್ರಚಾರ ಕಾರ್ಯಕ್ಕೆ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎನ್ನುವ ಬೇಸರ ಸ್ಥಳೀಯ ಮುಖಂಡರದ್ದು. ಮನೆ ಮನೆಗೆ ಮತಯಾಚನೆಗೆ ತೆರಳುವ ಸಂದರ್ಭ ಕಾರ್ಯಕರ್ತೆಯರು ಇದ್ದರೆ ಮಹಿಳಾ ಮತದಾರರ ಜೊತೆ ವ್ಯವಹರಿಸಲು ಸುಲಭವಾಗುತ್ತದೆ. ಕೆಲವು ಮನೆಗಳಲ್ಲಿ ಮಹಿಳೆಯರು ಮಾತ್ರ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತೆಯರು ಹೆಚ್ಚು ಇದ್ದರೆ ಅನುಕೂಲ. ಆದರೆ ಈಗ ಪ್ರಚಾರಕ್ಕೆ ಮಹಿಳಾ ಕಾರ್ಯಕರ್ತರನ್ನು ಕರೆತರುವುದಕ್ಕೆ ಹರಸಾಹಸ ಪಡಬೇಕಿದೆ. ಬಿಸಿಲು ಹೆಚ್ಚು ಇರುವುದರಿಂದ ಹೆಚ್ಚು ಸುಸ್ತಾಗುತ್ತದೆ. ಗ್ಲ್ಯಾಮರ್ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಹಗಲಿನ ಪ್ರಚಾರಕ್ಕೆ ಬರಲು ಕಾರ್ಯಕರ್ತೆಯರು ಹಿಂದೇಟು ಹಾಕುತ್ತಿದ್ದಾರೆ. ಸಂಜೆ ಮತ್ತು ಬೆಳಗ್ಗೆ ಕೌಟುಂಬಿಕ ಕೆಲಸ, ಕಾರ್ಯಗಳ ಒತ್ತಡದಲ್ಲಿ ಇರುವುದರಿಂದ ಈ ಸಮಯವೂ ಅವರಿಗೆ ಸೂಕ್ತವಾಗಿ ಇರುವುದಿಲ್ಲ. ಹಾಗಾಗಿ ರಾಜಕೀಯ ಪಕ್ಷಗಳ ಪ್ರಚಾರದಲ್ಲಿ ಮಹಿಳಾ ಕಾರ್ಯಕರ್ತರ ಕೊರತೆ ಕಂಡುಬರುತ್ತಿದೆ.
ಬಿಸಿಲು ಹೆಚ್ಚಾಗಿದ್ದು ಹಗಲಿನಲ್ಲಿ ಪ್ರಚಾರ ಸಾಕಷ್ಟು ತೊಂದರೆ ಉಂಟು ಮಾಡುತ್ತಿದೆ. ಕೊಡಗಿನಲ್ಲೂ ಈ ಬಾರಿ ತಾಪ ಹೆಚ್ಚು ಇದೆ. ಸಂಜೆ ಅಥವಾ ಬೆಳಗ್ಗೆ ಪ್ರಚಾರಕ್ಕೆ ತೆರಳಲು ಸೂಕ್ತ ಸಮಯ. ಕೆಲಸಕ್ಕೆ ತೆರಳುವವರು ಈ ವೇಳೆಯಲ್ಲಿ ಮನೆಯಲ್ಲಿ ಇರುವುದರಿಂದಲೂ ಎಲ್ಲರ ಭೇಟಿ ಸಾಧ್ಯವಾಗುತ್ತದೆ.
ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿ ಶಾಸಕ
ನಾವು ಪ್ರಚಾರಕ್ಕೆ ಸಂಜೆ ಸಮಯ ಆಯ್ಕೆ ಮಾಡಿಕೊಂಡಿದ್ದೇವೆ. ಬಿಸಿಲಿನ ತಾಪ ಕಡಿಮೆ ಆಗುವುದು ಒಂದು ಕಾರಣವಾದರೆ, ಮನೆಯವರೆಲ್ಲಾ ಈ ಸಮಯದಲ್ಲಿ ಬಹುತೇಕ ಮನೆಯಲ್ಲೇ ಇರುತ್ತಾರೆ. ನಮ್ಮ ಕಾರ್ಯಕರ್ತರೂ ಜತೆ ಸೇರಲು ಅನುಕೂಲ ಆಗುತ್ತದೆ.
ವಿ.ಎನ್. ಉಮಾಶಂಕರ್, ಅಧ್ಯಕ್ಷ, ನಗರ ಬಿಜೆಪಿ, ಕುಶಾಲನಗರ