ಕ್ಯಾಂಟರ್ ಡಿಕ್ಕಿಯಾಗಿ ಮಹಿಳೆ ಸಾವು

3
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಿಶ್ವನಾಥಪುರ ಗ್ರಾಮಸ್ಥರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
Published on

ರಸ್ತೆ ದಾಟುತ್ತಿದ್ದಾಗ ಅವಘಡ

ಕುಂದಾಣ: ವಿಶ್ವನಾಥಪುರ ನಿಲ್ದಾಣದಲ್ಲಿ ಬಸ್ ಇಳಿದು ರಸ್ತೆ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ಮಹಿಳೆ ಗುರುವಾರ ಮೃತಪಟ್ಟಿದ್ದು, ಆಕೆಯ ಪುತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ವಿಶ್ವನಾಥಪುರದ ನಿವಾಸಿ ದೀಪಾ (24) ಮೃತೆ. ಆಕೆಯ ಪುತ್ರಿ ಧನ್ಯಶ್ರೀ (8)ಗೆ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ, ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವನಹಳ್ಳಿಯಿಂದ ಗ್ರಾಮಕ್ಕೆ ಬರುತ್ತಿದ್ದಾಗ ದುರಂತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಗ್ರಾಮ ಸಂಪರ್ಕಿಸಲು ವೈಜ್ಞಾನಿಕ ವ್ಯವಸ್ಥೆ ಇಲ್ಲದಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಗ್ರಾಮಸ್ಥರ ಆಕ್ರೋಶ: ದೀಪಾ ಶವವನ್ನು ಆಸ್ಪತ್ರೆಯಿಂದ ನೇರವಾಗಿ ಗ್ರಾಮಕ್ಕೆ ಶುಕ್ರವಾರ ತರುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಆಂಬುಲೆನ್ಸ್ ತಡೆದು ಪ್ರತಿಭಟನೆಗೆ ಮುಂದಾದರು. ಈ ಹಿಂದೆ ವಿಶ್ವನಾಥಪುರ ಪಬ್ಲಿಕ್ ಶಾಲೆಯ ಬಳಿ ಸರಣಿ ಅಪಘಾತ ಸಂಭವಿಸಿರುವುದು ಮಾಸುವ ಮುನ್ನವೇ ಅಪಘಾತಕ್ಕೆ ಮತ್ತೊಂದು ಜೀವ ಬಲಿಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಕೈವಾಕ್ ಅಥವಾ ಅಂಡರ್ ಪಾಸ್ ನಿರ್ಮಿಸಿಲ್ಲ. ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗಲೂ ಭರವಸೆ ನೀಡಿ ತೆರಳುತ್ತಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.

ಅಲ್ಲದೆ ವಿಶ್ವನಾಥರ ಗ್ರಾಮ ಪಂಚಾಯಿತಿಗೂ ಕೆಲಕಾಲ ಬೀಗ ಜಡಿದು ಪೊಲೀಸರು ಹಾಗೂ ಪಂಚಾಯಿತಿ ಸಿಬ್ಬಂದಿ ವಿರುದ್ಧ ಗಲಾಟೆಗಿಳಿದರು.

ಮೃತ ಮಹಿಳೆಯ ಕುಟುಂಬಕ್ಕೆ ಶಾಸಕರು 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು. ಮೃತೆಯ ಪುತ್ರಿಯ ಶಿಕ್ಷಣದ ವೆಚ್ಚವನ್ನು ಸರ್ಕಾರ ಭರಿಸಬೇಕು. ಗ್ರಾಮದಲ್ಲಿ ತುರ್ತಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಕೆಟ್ಟಿರುವ ಸಿಸಿ ಕ್ಯಾಮರಾಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಹೆದ್ದಾರಿ ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ನೇರ ಹೊಣೆಗಾರರು, ಈ ಹೋರಾಟ ಸಾಂಕೇತಿಕ. ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ. -ನರಸಿಂಹರಾಜು, ಬಿಎಸ್‌ಪಿ ಜಿಲ್ಲಾಧ್ಯಕ್ಷ

ಟಿಪ್ಪರ್ ಹರಿದು ಬೈಕ್ ಸವಾರರು ಸಾವು ದೇವನಹಳ್ಳಿ: ಕನ್ನಮಂಗಲಪಾಳ್ಯ ಗೇಟ್ ಬಳಿ ಟಿಪ್ಪರ್ ಲಾರಿ ಹರಿದು ಇಬ್ಬರು ಬೈಕ್ ಸವಾರರು ಶುಕ್ರವಾರ ಮೃತಪಟ್ಟಿದ್ದಾರೆ. ಬಳ್ಳಾರಿಯಿಂದ ಉದ್ಯೋಗ ಅರಸಿ ಬಂದು ಕನ್ನಮಂಗಲ ಪಾಳ್ಯದಲ್ಲಿ ವಾಸವಿದ್ದ ಜಿ.ಮಸ್ತಾನ್‌ವಲಿ (44) ಹಾಗೂ ಹಿಂಬದಿಯ ಸವಾರ ಮೊಹಮದ್ ಅಸ್ಲಾಂ (35) ಮೃತರು. ಇಬ್ಬರೂ ಒಂದೇ ಕುಟುಂಬದವರು. ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.

ಮಾಂಗಲ್ಯ ಸರ ಕದ್ದವನು ಅರೆಸ್ಟ್

ಆನೇಕಲ್: ಹೆಬ್ಬಗೋಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್‌ನಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಳವು ಮಾಡಿದ್ದ ಆರೋಪಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೆಗ್ಗನಹಳ್ಳಿಯ ಗಗನಚಂದ್ರ(33) ಬಂಧಿತ. ಜ.17ರಂದು ರಂಗಮ್ಮ ರಸ್ತೆ ದಾಟಲು ಅಂಡರ್‌ಪಾಸ್‌ನಲ್ಲಿ ನಡೆದು ಹೋಗುತ್ತಿದ್ದಾಗ ಮಾಂಗಲ್ಯ ಸರವನ್ನು ಕಸಿದುಕೊಂಡು ಗಗನಚಂದ್ರ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಹೆಬ್ಬಗೋಡಿ ಪೊಲೀಸರು ತಂಡ ರಚಿಸಿ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದರು. ಸಿಸಿ ಕ್ಯಾಮರಗಳ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಆರೋಪಿಯಿಂದ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಸೋಮಶೇಖರ್, ಪಿಎಸ್‌ಐ ಮಂಜುನಾಥ್, ಸಿಬ್ಬಂದಿ ಗಿರೀಶ್, ರಾಜು, ಪ್ರಭುಕುಮಾರ್, ಶಿವಪ್ರಕಾಶ್, ಧರೆಪ್ಪ ಪಾಟೀಲ್, ಪ್ರವೀಣ್ ನಾಯಕ್, ಅನಿಲ್ ಆಶಾಪುರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net