

40 ಲಕ್ಷ ರೂ ವೆಚ್ಚದಲ್ಲಿ ಬೆಳ್ಳೂರಿನಲ್ಲಿ ಚಾಲನೆ
ನಾಗಮಂಗಲ : ತಾಲೂಕಿನ ಬೆಳ್ಳೂರಿನಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೋಬಳಿ ಮಟ್ಟದ ಮೊದಲ ಇಂದಿರಾ ಕ್ಯಾಂಟಿನ್‌ಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಒಂದು ದಿನದ ಊಟಕ್ಕೆ 67 ರೂ.ಗೆ ಟೆಂಡರ್ ಆಗಿದೆ. ಈ ಕ್ಯಾಂಟಿನ್‌ನಲ್ಲಿ ಒಬ್ಬ ವ್ಯಕ್ತಿ ಕೇವಲ 25 ರೂ ಕೊಟ್ಟು ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. ಇನ್ನುಳಿದ 42 ರೂ.ಗಳನ್ನು ರಾಜ್ಯಸರ್ಕಾರವೇ ಭರಸಲಿದೆ. ಕೂಲಿ ಕಾರ್ಮಿಕರು, ಬಡವರು, ಕೃಷಿಕರು ಸೇರಿದಂತೆ ಎಲ್ಲ ವರ್ಗಗಳ ಜನರು ಇಂದಿರಾ ಕ್ಯಾಂಟಿನ್ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಜನರು ತೆಗೆದುಕೊಳ್ಳುವ ತೀರ್ಮಾನಕ್ಕೆ ಅಧಿಕಾರಿಗಳೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಯೂ ಹೊಣೆಯಲ್ಲ. ಯಾರನ್ನು ಆಯ್ಕೆ ಮಾಡಿದರೆ ಈ ದೇಶ, ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಅನುಕೂಲ ವಾಗುತ್ತದೆ ಎಂಬುದನ್ನು ಯೋಚಿಸುವ ಶಕ್ತಿ ಜನರ ಕೈಯಲಿದೆ. ನಾನು ಶಾಸಕನಾದ ತಕ್ಷಣವೇ ಎಲ್ಲ ಸಮಸ್ಯೆ ಎದುರಾಗುತ್ತವೆ. ಅದೇ ನಾನು ಸೋತಾಗ ಯಾವ ಸಮಸ್ಯೆಯೂ ಜನರಿಗೆ ಕಾಣಿಸುವುದಿಲ್ಲ. 2013ರಿಂದ 2018ರವರೆಗಿನ ಅವಧಿಯಲ್ಲಿ ಶೇ.70ರಷ್ಟು ರಸ್ತೆ ಅಭಿವೃದ್ಧಿ ಪಡಿಸಿದ್ದೇನೆ. ಈಗ ಅವೆಲ್ಲವೂ ಹಾಳಾಗಿವೆ. ಉಳಿದಿರುವ ಎಲ್ಲ ಹಳ್ಳಿಗಳ ರಸ್ತೆಗಳನ್ನೂ ಅಭಿವೃದ್ಧಿ ಪಡಿಸುತ್ತೇನೆ. ಆದರೆ ಈಗಲೇ 600 ಹಳ್ಳಿಗಳಿಗೂ ರಸ್ತೆ ಆಗಬೇಕೆಂದು ಕೇಳುತ್ತೀರಲ್ಲಾ. ಕ್ಷೇತ್ರದ ಜನರು ಕೇಳಿದರೆ ನನಗೆ ಬೇಸರವಿಲ್ಲ. ನನ್ನೊಂದಿಗಿರುವ ಮುಖಂಡರು, ಬುದ್ಧಿವಂತರು ಕೇಳುತ್ತೀರಲ್ಲಾ . ನನಗೆ ಕೋಪ ಬರುವುದಿಲ್ಲವೇ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
ರುಚಿ - ಶುಚಿಯಾದ ಆಹಾರ: ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಬೆಳ್ಳೂರಿನಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲೇಬೇಕೆಂದು ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ಕೊಟ್ಟು ರುಚಿ ಹಾಗೂ ಶುಚಿಯಾದ ಆಹಾರವನ್ನು ಇಲ್ಲಿಯೇ ತಯಾರಿಸಿ ನಿಗದಿಪಡಿಸಿರುವ ಕಡಿಮೆ ದರದಲ್ಲಿ ಜನರಿಗೆ ನೀಡಬೇಕು ಎಂದು ಟೆಂಡರ್‌ದಾರರಿಗೆ ಸೂಚನೆ ನೀಡಲಾಗಿದೆ. ಪ್ರತಿನಿತ್ಯ 200 ಪ್ಲೇಟ್ ಊಟಕ್ಕೆ ಮಂಜೂರಾತಿ ಸಿಕ್ಕಿದೆ ಎಂದರು. ಬೆಳ್ಳೂರು ಪ.ಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಮಹಮ್ಮದ್ ಯಾಸೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ನಿತಿನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಮಾಯಣ್ಣಗೌಡ, ತಹಸೀಲ್ದಾರ್ ಜಿ.ಆದರ್ಶ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಬ್ರಹ್ಮದೇವರಹಳ್ಳಿ ಸೊಸೈಟಿ ನಿರ್ದೇಶಕ ಸಚ್ಚಿನ್ ಚಲುವರಾಯಸ್ವಾಮಿ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ಪದ್ಮನಾಭ(ಪಾಪಣ್ಣ) ಶಿವಣ್ಣ, ವೆಂಕಟೇಶ್, ಸಾವಿತ್ರಮ್ಮ ಇತರರಿದ್ದರು.