

ಸಾಗರ: ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿಯೇ ಗುರುಭವನವೊಂದನ್ನು ನಿರ್ಮಿಸಲಾಗಿದೆ. ಇದನ್ನು ಕಟ್ಟುವಾಗಲೇ ಅಪಸ್ವರಗಳು ಕೇಳಿ ಬಂದಿದ್ದವು. ಕಾಮಗಾರಿಯೂ ಕಳಪೆಯಾಗಿದೆ. ಈಗ ಅದು ಉಪಯೋಗಿಲು ಸಾಧ್ಯವಾಗದ ಸ್ಥಿತಿಯಲ್ಲಿದೆ.
ಗುರುಭವನವನ್ನು ಶಿಕ್ಷಕರ ಅಗತ್ಯಕ್ಕೆ ಉಪಯೋಗಿಸದೆ ಆಗ, ಈಗ ಬಾಡಿಗೆಗೆ ನೀಡಲಾಗುತ್ತದೆ. ಶಿಕ್ಷಣಾಧಿಕಾರಿಗಳ ಹಳೆಯ ಕಚೇರಿಗೆ ತಾಗಿಕೊಂಡಂತೆ ಇರುವ ಈ ಗುರುಭವನದಿಂದ ಹಳೆಯ ಕಟ್ಟಡಕ್ಕೆ ತೆರಳಲು ಮಾರ್ಗವೊಂದನ್ನು ಇಟ್ಟುಕೊಂಡಿದ್ದು ಇಲ್ಲಿ ಶಿಕ್ಷಕರ ಸಹಕಾರ ಸಂಘ ಛಾಪಾ ಕಾಗದಗಳನ್ನು ಕೊಡುವ ಕೇಂದ್ರವೊಂದನ್ನು ಮಾಡಿಕೊಂಡಿದೆ. ಈ ಕೇಂದ್ರಕ್ಕೆ ತೆರಳಲು ಗುರುಭವನದ ಒಳಗಿನಿಂದಲೇ ಪ್ರವೇಶ ಮಾಡಬೇಕು. ಗುರುಭವನ ಇಲಾಖೆಯ ಗೋಡಾನ್ ಕೂಡ ಆಗಿದೆ. ಬಂದ ಪುಸ್ತಕಗಳನ್ನು ಶೇಖರಿಸಿಡುವುದು, ಮಕ್ಕಳಿಗೆ ಬಂದ ಸೈಕಲ್‌ಗಳನ್ನು ಸಂಗ್ರಹಿಸಿಟ್ಟು ತಲುಪಿಸುವುದು ಇಂತದ್ದಕ್ಕೆ ಮಾತ್ರ ಉಪಯೋಗವಾಗುತ್ತಿದೆ. ಕಳೆದ ವರ್ಷ ಮಾರಿ ಜಾತ್ರೆಯಲ್ಲಿ ಬಾಡಿಗೆ ಕೊಟ್ಟಿದ್ದರಿಂದ 1 ಲಕ್ಷ ರೂ. ಆದಾಯ ಬಂದಿತ್ತು ಎನ್ನುತ್ತಾರೆ ಮೇಲ್ವಿಚಾರಕರು. ಅದನ್ನು ಹೊರತುಪಡಿಸಿದರೆ ಯಥಾಪ್ರಕಾರ ಗುರುಭವನ ಧೂಳುಮಯವಾಗಿ ಉಳಿದಿದೆ. ಕೈತೊಳೆಯುವ ಯಾವುದೇ ನಲ್ಲಿಗಳಲ್ಲಿ ನೀರು ಬರುವುದಿಲ್ಲ, ಶೌಚಗೃಹವಂತೂ ಹೋಗಲೇಬಾರದು. ಸುಣ್ಣ ಬಣ್ಣವಿಲ್ಲದೆ ಮಂಕುಕವಿದು ಗ್ರಹಣ ಬಾಧಿಸಿದೆ.
ಗುರುಭವನದ ಮೇಲ್ವಿಚಾರಣೆ ನೋಡಲು ಸಮಿತಿಯೊಂದು ಇದ್ದು ಕ್ಷೇತ್ರಶಿಕ್ಷಣಾಧಿಕಾರಿಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೂಡ ಪ್ರಮುಖ ಸ್ಥಾನದಲ್ಲಿದ್ದಾರೆ. ಬಹುತೇಕರು ಸಂಘಗಳ ಚುನಾವಣೆಗಳಲ್ಲಿ ಗೆದ್ದು ಪದವಿಗೆ ಚಿಂತನೆ ಮಾಡುತ್ತ ಬಂದಿದ್ದಾರೆಯೇ ಹೊರತು ಊರಿನ ಹೃದಯ ಭಾಗದಲ್ಲಿರುವ ಗುರುಭವನಕ್ಕೆ ಕಾಯಕಲ್ಪ ನೀಡುವಲ್ಲಿ ಈಗಲೂ ಯಾವುದೇ ಪ್ರಯತ್ನ ನಡೆಸಿಲ್ಲ. ವರ್ಷಕ್ಕೆ ಒಂದು ಬಾರಿ ಈ ಭವನದಲ್ಲಿ ಸಾಂಪ್ರದಾಯಿಕ ಶಿಕ್ಷಕರ ದಿನಾಚರಣೆಯನ್ನು ನಡೆಸಲಾಗುತ್ತಿತ್ತು. ಗುರುಭವನದ ದುಸ್ಥಿತಿಯಿಂದಾಗಿ ಶಿಕ್ಷಕರ ದಿನಾಚರಣೆಯನ್ನು ಬೇರೆಡೆ ಮಾಡುತ್ತಿದ್ದಾರೆ. ಸ್ವಲ್ಪ ದಿನದಲ್ಲಿ ಈ ಭವನ ಕಾಯಂ ಮುಚ್ಚುವ ಸಾಧ್ಯತೆ ಕಂಡುಬರುತ್ತಿದೆ. ಶಿಕ್ಷಕರು ತಮ್ಮ ಅಭ್ಯುದಯಕ್ಕಾಗಿಯೇ ಇರುವ ಗುರುಭವನವನ್ನು ವ್ಯವಸ್ಥಿತವಾಗಿ ಕಟ್ಟಿಕೊಳ್ಳುವಲ್ಲಿ ಏಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.