

ಸೋಮವಾರಪೇಟೆ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರವೂ ಧಾರಾಕಾರ ಮಳೆಯಾಗಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಮಂಕ್ಯಾ, ಹಮ್ಮಿಯಾಲ, ಕಿಕ್ಕರಳ್ಳಿ, ಸೂರ್ಲಬ್ಬಿ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು, ಕೃಷಿಕರು ಮನೆಯಿಂದ ಹೊರ ಬರಲಾರದೆ ಪರದಾಡುತ್ತಿದ್ದಾರೆ. ದನ-ಕರುಗಳನ್ನು ಕೊಟ್ಟಿಗೆಯಿಂದ ಹೊರಬಿಡಲು ಸಾಧ್ಯವಾಗುತ್ತಿಲ್ಲ ಎಂದು ಕುಂಬಾರಗಡಿಗೆ ನಿವಾಸಿ ಜಯಂತಿ ತಿಳಿಸಿದ್ದಾರೆ.
ಗ್ರಾಮಗಳಲ್ಲಿ ನಾಟಿಗೆ ಹದ ಮಾಡಿದ್ದ ಗದ್ದೆಗಳು ಜಲಾವೃತವಾಗಿದ್ದು, ಸಸಿ ಮಡಿಗಳು ಕೊಚ್ಚಿ ಹೋಗಿವೆ. ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ಭತ್ತದ ಗದ್ದೆಗಳು ನೀರಿನಿಂದ ಆವೃತವಾಗಿದೆ. ತೋಳೂರುಶೆಟ್ಟಳ್ಳಿ ಗ್ರಾಮ ನಿವಾಸಿ ಲಕ್ಷ್ಮಮ್ಮ ಹಾಗೂ ಬೀದಳ್ಳಿ ಈರಪ್ಪ ಅವರ ಮನೆಯ ಗೋಡೆ ಕುಸಿದಿದೆ.
ಮಡಿಕೇರಿ, ಹಾಸನ ರಾಜ್ಯ ಹೆದ್ದಾರಿಯ ಹೆಗ್ಗಳ ಗ್ರಾಮದ ಸಮೀಪ ರಸ್ತೆಗಡ್ಡಲಾಗಿ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿತ್ತು. ಶನಿವಾರಸಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ಸುತ್ತಮುತ್ತ ಗ್ರಾಮಗಳಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ.