ಸರ್ಕಾರಿ ನೌಕರರೆಂದು ಪರಿಗಣಿಸಲಾಗದು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅಭಿಪ್ರಾಯ

13ank news and photos 01
Published on

ಆನೇಕಲ್: ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಂತಹ ಅನೇಕ ನಿಗಮ ಹಾಗೂ ಸಂಸ್ಥೆಗಳಿದ್ದು, ಒಂದು ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿದರೆ ಬೇರೆ ನಿಗಮ ಹಾಗೂ ಸಂಸ್ಥೆಗಳ ನೌಕರರೂ ಕೇಳುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ನಡೆಯುತ್ತಿದ್ದ ಕನಕ ಜಯಂತಿಗೆ ತೆರಳುವ ಮಾರ್ಗಮಧ್ಯೆ ಆನೇಕಲ್‌ನಲ್ಲಿ ಮಾತನಾಡಿದರು.

ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಒಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ನೌಕರರು ಇದ್ದಾರೆ. ಬಜೆಟ್‌ನ ಶೇ.45 ಸರ್ಕಾರಿ ನೌಕರರ ಸಂಬಳಕ್ಕೆ ಬಳಕೆಯಾಗುತ್ತಿದೆ. ಸಂಬಳ ಹಾಗೂ ಪಿಂಚಣಿ ಹೆಚ್ಚಿಸಿ ಎಂದು ಕೇಳುವುದು ಸರಿಯಲ್ಲ ಎಂದರು.

ಸಾರಿಗೆ ಸಂಸ್ಥೆ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸರ್ಕಾರಿ ನೌಕರರು ಅಲ್ಲ ಎಂಬ ಒಪ್ಪಂದಕ್ಕೆ ಬದ್ಧರಾಗಿ ಸಹಿ ಹಾಕಿರುತ್ತಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿದರೆ ಗ್ರಾಮೀಣಾಭಿವೃದ್ಧಿ, ರಸ್ತೆ, ಚರಂಡಿ ನಿರ್ಮಾಣಕ್ಕೆ ಹಣ ಉಳಿಯುವುದೇ ಇಲ್ಲ. ಹೀಗಾಗಿ ನೌಕರರು ಒತ್ತಡ ತುರುವುದು ಬೇಡ ಎಂದರು.

ಸಿದ್ದರಾಮುಯ್ಯನದು ತಿರುಕನ ಕನಸು: ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಅಲ್ಪಸಂಖ್ಯಾತರನ್ನು ಒಲೈಸುತ್ತಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಮಂಗಳೂರಿನಲ್ಲಿ ಕೊಟ್ಟಿಗೆಗೆ ನುಗ್ಗಿ ದನ, ಹಸು ಹಾಗೂ ಕರುಗಳನ್ನು ಕದಿಯುತ್ತಿದ್ದರು. ಇದನ್ನು ತಡೆಯಲು ಬಂದವರ ಮೇಲೆ ಹಲ್ಲೆ ನಡೆಸುತ್ತಿದ್ದರು. ಹಸು ರಕ್ಷಿಸಲು ಮುಂದಾದ ಯುವಕನೊಬ್ಬ ಕೊಲೆಯಾಗಿದ್ದ. ಈ ಬಗ್ಗೆ ವಿಧಾನ ಪರಿಷತ್‌ನಲ್ಲೂ ಚರ್ಚೆ ನಡೆದಿತ್ತು. ಆಗ ಸಿದ್ದರಾಮಯ್ಯ ಆರ್‌ಎಸ್‌ಎಸ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಗೋಮಾತೆಯ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎನ್ನುವುದು ಕಾಂಗ್ರೆಸ್ ನವರ ಹಗಲು ಕನಸಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಇನ್ನು ಮುಂದೆ ಅಧಿಕಾರಕ್ಕೆ ಬರುವುದಿಲ್ಲ. ಲವ್ ಜಿಹಾದ್ ಬಗ್ಗೆ ಕಾಂಗ್ರೆಸ್ ಚಕಾರ ಎತ್ತುವುದಿಲ್ಲ. ಮುಂದಿನ ದಿನಗಳಲ್ಲಿ ಲವ್ ಜಿಹಾದ್ ಕಿತ್ತುಹಾಕಿ ಹೆಣ್ಣುಮಕ್ಕಳ ರಕ್ಷಣೆಗೆ ಬಿಜೆಪಿ ಸರ್ಕಾರ ಮುಂದಾಗುತ್ತದೆ ಎಂದರು.

ಬೈಕ್ ರ‌್ಯಾಲಿ: ಆನೇಕಲ್‌ನ ರಾಯಣ್ಣ ಬ್ರಿಗೇಡ್ ಸದಸ್ಯರು ಹಾಗೂ ಅಭಿಮಾನಿಗಳು ಕೆ.ಎಸ್.ಈಶ್ವರಪ್ಪ ಅವರನ್ನು ಸ್ವಾಗತಿಸಿದರು. ನಂತರ ಈಶ್ವರಪ್ಪ ಅವರು ದೇವರಕೊಂಡಪ್ಪ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿ ಅಭಿಮಾನಿಗಳು ಬೈಕ್ ಮೂಲಕ ಅವರನ್ನು ಚೌಡೇಶ್ವರಿ ದೇವಾಲಯಕ್ಕೆ ಕರೆದುಕೊಂಡು ತೆರಳಿದರು. ದೇವಿಗೆ ಪೂಜೆ ಸಲ್ಲಿಸಿ ಡೆಂಕಣಿಕೋಟೆಯತ್ತ ನಡೆದರು.

ಗ್ರಾಪಂ ಚುನಾವಣೆಯಲ್ಲಿ ಜನ ಪ್ರತಿನಿಧಿಗಳನ್ನು ಹರಾಜು ಹಾಕುವುದು ಕಾನೂನುಬಾಹಿರ. ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಈಗಾಗಲೇ ಚುನಾವಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ. ಈಶ್ವರಪ್ಪ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net