ಗಾಂಜಾ ಮಿಶ್ರಿತ ಚಾಕ್ಲೇಟ್ ದಂಧೆ

14BDVT2 (1)
ಭದ್ರಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಸದಸ್ಯರು.
Published on

ಭದ್ರಾವತಿ: ನಗರದೆಲ್ಲೆಡೆ ಗಾಂಜಾ ಮಿಶ್ರಿತ ಚಾಕ್ಲೇಟ್ ದಂಧೆ ಹೆಚ್ಚುತ್ತಿದ್ದು ಪೊಲೀಸರು ಈ ಬಗ್ಗೆ ಗಂಭಿರವಾಗಿ ಗಮನಹರಿಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಗುರುವಾರ ನಗರಸಭೆಯ ಸಾಮಾನ್ಯಸಭೆಯಲ್ಲಿ ಟಿಪ್ಪುಸುಲ್ತಾನ್ ಮಾತನಾಡಿ, ನಗರದಲ್ಲಿ ಗಾಂಜಾ ಸೇವಿಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಅವರು ಗಾಂಜಾ ಅಮಲಿನಲ್ಲಿ ಚಾಕು, ಚೂರಿಗಳನ್ನು ಹಿಡಿದು ಹಲ್ಲೆ ನಡೆಸುವಷ್ಟರ ಮಟ್ಟಿಗೆ ಪರಿಸ್ಥಿತಿ ಉಲ್ಬಣಗೊಂಡಿದೆ. ಪೊಲೀಸರಿಗೇ ಚಾಕು ಹಾಕಲು ಹೋದ ಪ್ರಕರಣಗಳೂ ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ವಿಶೇಷ ಗಮನಹರಿಸಬೇಕೆಂದು ಹೆಳಿದರು. ಈ ಮಾತನ್ನು ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಿದರು.
ಆಗ ಹಳೇನಗರ ಪಿಎಸ್‌ಐ ಶರಣಪ್ಪ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೆರೆಗೆ ನಮ್ಮ ಇಲಾಖೆ ತಾಲೂಕಿನಲ್ಲಿ ಗಾಂಜಾ ಮಾರಾಟ, ಸೇವನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುತ್ತಿದೆ. ಆಂಧ್ರಪ್ರದೇಶದಿಂದ ಗಾಂಜಾ ಪೂರೈಕೆ ಆಗುತ್ತಿರುವ ಮಾಹಿತಿಯಿದ್ದು ಗೌರಿ-ಗಣಪತಿ ಹಬ್ಬದ ನಂತರ ನಮ್ಮ ತಂಡ ಆಂಧ್ರಪ್ರದೇಶಕ್ಕೆ ತೆರಳಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದರು.
ಅಲ್ಲದೆ ಪೊಲೀಸರು ಬಂಧಿಸುವ ಆರೋಪಿಗಳ ಬಿಡುಗಡೆಗೆ ರಾಜಕೀಯ ಒತ್ತಡ ಹೇರದಿದ್ದರೆ ನಮ್ಮ ಕೆಲಸ ಮಾಡಲು ಸುಗಮವಾಗುತ್ತದೆ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು, ನಾವು ಆ ರೀತಿ ಬಂಧಿತ ಆರೋಪಿಗಳ ಬಿಡುಗಡೆಗೆ ಒತ್ತಡ ಹೇರುವುದಿಲ್ಲ ಎಂದು ಪ್ರಮಾಣ ಮಾಡುತ್ತೇವೆ ಎಂದು ಎದ್ದು ಕುಳಿತರು. ಆಗ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು, ನಾವ್ಯಾರು ಈವರೆಗೆ ಆ ರೀತಿ ಪೊಲೀಸರಿಗೆ ಒತ್ತಡ ಹಾಕುವ ಕಾರ್ಯ ಮಾಡಿಲ್ಲ. ಆದ್ದರಿಂದ ಪ್ರಮಾಣ ಮಾಡುವ ಅಗತ್ಯವಿಲ್ಲ ಎಂದು ಸುಮ್ಮನಾಗಿಸಿದರು.
ಗಣೇಶೋತ್ಸವವನ್ನು ನಗರದ ಅನೇಕ ಬಡಾವಣೆಗಳಲ್ಲಿ ಯುವಕರು, ಮಕ್ಕಳು ಸಾರ್ವಜನಿಕವಾಗಿ ಮಾಡುತ್ತಾರೆ. ಇಂತರ ಪೆಂಡಾಲ್‌ಗಳಿಗೆ ರಾಜ್ಯ ಸರ್ಕಾರ ನೀಡಿರುವ ಉಚಿತ ವಿದ್ಯುತ್ ಯೋಜನೆಯಡಿ ವಿದ್ಯುತ್ ಒದಗಿಸಬೇಕು ಮತ್ತು ಪೊಲೀಸರು ಕಿರುಕುಳ ನೀಡಬಾರದು ಎಂದು ಸದಸ್ಯರು ಆಗ್ರಹಿಸಿದರು.
ಮಾಧವಾಚಾರ್ ವೃತ್ತದ ಬಳಿ ನಿರ್ಮಾಣ ಆಗುತ್ತಿರುವ ಹೊಸ ಸೇತುವೆ ಕಾಮಗಾರಿಗೆ ಕಟ್ಟಡ ತೆರವುಗೊಳಿಸಬೇಕು ಎಂದು ಆಗ್ರಹಿಸಿದ ಸದಸ್ಯರು, ಆ ಕುರಿತಂತೆ ನಗರಸಭೆ ಗೊತ್ತುವಳಿ ಮಾಡಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲು ನಿರ್ಧರಿಸಿದರು.
ಪುರಸಭೆ ಮಾಜಿ ಸದಸ್ಯ ಗೋವಿಂದಸ್ವಾಮಿ ನಿಧನಕ್ಕೆ ಮೌನಾಚರಣೆ ಮಾಡಲಾಯಿತು. ಉಪಾಧ್ಯಕ್ಷೆ ಸರ್ವಮಂಗಲಾ ಬೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net