

ಬೆಂಗಳೂರು ಗ್ರಾಮಾಂತರ: ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ದೊಡ್ಡ ಸದ್ದು ಮಾಡುತ್ತಿರುವ ನಡುವೆಯೇ ರಾಜ್ಯ ರಾಜಧಾನಿಗೆ ಹೊಂದಿಕೊಂಡಂತಿರುವ ಗ್ರಾಮಾಂತರ ಜಿಲ್ಲೆಯಲ್ಲೂ ನಶೆ ಏರಿಸುವ ದಂಧೆ ಬೇರುಬಿಟ್ಟಿದೆ ಎಂಬ ಮಾತು ಹರಿದಾಡುತ್ತಿದೆ.
ಎಲ್ಲಕ್ಕೂ ಪ್ರಮುಖವಾಗಿ ಜಿಲ್ಲೆಯಲ್ಲಿ ಗಾಂಜಾ ವಹಿವಾಟು ಹೆಡೆಬಿಚ್ಚಿರುವ ಬಗ್ಗೆ ಪೊಲೀಸರು ಅಲರ್ಟ್ ಆಗಿದ್ದಾರೆ. ಕಳೆದೆರೆಡು ದಿನಗಳಲ್ಲೇ ದೇವನಹಳ್ಳಿ ಹಾಗೂ ನೆಲಮಂಗಲದಲ್ಲಿ ಮೂವರು ಗಾಂಜಾ ದಂಧೆಕೋರರ ಬಂಧನವಾಗಿರುವುದು ಜಿಲ್ಲೆಗೆ ಬೆಸೆದುಕೊಂಡಿರುವ ಗಾಂಜಾ ನಂಟಿಗೆ ಸಾಕ್ಷಿ ಎನ್ನಲಾಗಿದೆ.
ಏರ್‌ಪೋರ್ಟ್ ಕಳ್ಳಮಾರ್ಗ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ ಮೂಲಕ ಜಿಲ್ಲೆಗೆ ಗಾಂಜಾ ಮತ್ತಿತರ ಡ್ರಗ್ಸ್ ಸರಬರಾಜಾಗುತ್ತಿದೆ. ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಕಾಳದಂಧೆ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಕೂಲಿ ಕಾರ್ಮಿಕರಿಗೂ ಗಾಂಜಾ ಸರಬರಾಜಾಗುತ್ತಿದೆ ಎಂಬ ಮಾತು ಹರಿದಾಡುತ್ತಿದೆ.
ಲಾಕ್‌ಡೌನ್ ವೇಳೆ ಹೆಚ್ಚು: ಕರೊನಾ ಹಿನ್ನೆಲೆಯಲ್ಲಿ ಸುದೀರ್ಘ ಲಾಕ್‌ಡೌನ್ ೋಷಣೆಯಾದ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಗಾಂಜಾ ವಹಿವಾಟು ನಡೆದಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಮದ್ಯಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಮದ್ಯವ್ಯಸನಿಗಳನ್ನು ಟಾರ್ಗೆಟ್ ಮಾಡಿದ ಗಾಂಜಾ ದಂಧೆಕೋರರು ಜಿಲ್ಲೆಯ ಹಲವು ಕಡೆ ಗಾಂಜಾ ಪೂರೈಕೆ ಮಾಡಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್ ವೇಳೆ ಕ್ಲಬ್, ಬಾರ್, ರೆಸಾರ್ಟ್‌ಗಳು ಬಾಗಿಲು ಹಾಕಿಕೊಂಡಿದ್ದರೂ ದಂಧೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯಲ್ಲಿ ಗಾಂಜಾ ಸರಬರಾಜು ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕಿನ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಂಜಾ ಮತ್ತಿತರ ಮಾದಕವಸ್ತು ಮಾರಾಟದ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸರಿಗೆ ಸುಳಿವು ನೀಡಬೇಕು. ರವಿ ಡಿ.ಚನ್ನಣ್ಣನವರ್ ಎಸ್‌ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
305 ಕೆಜಿ ಗಾಂಜಾ ವಶ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಎರಡು ದಿನದ ಹಿಂದೆ ಬಂಧಿಸಿ 3.5 ಕೆಜಿ ಗಾಂಜಾ ಜಪ್ತಿ ಮಾಡಿದ್ದರು. ಪಟ್ಟಣದ ಹೊರವಲಯದ ಖಾಸಗಿ ಡಾಬಾ ಬಳಿ ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ದೇವನಹಳ್ಳಿ ದಾಸರ ಬೀದಿಯ ನಾಗೇಶ್ (25), ಹೊಸಕೋಟೆಯ ಕುರುಬರಹಳ್ಳಿಯ ಮುನಿರಾಜು (33)ಎಂಬ ಆರೋಪಿಗಳು ಬಲೆಗೆ ಬಿದ್ದಿದ್ದು, ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ.
ಹೊಸಕೋಟೆ ನಂಟು: ಆರೋಪಿಯೊಬ್ಬ ಪೊಲೀಸರ ವಿಚಾರಣೆ ವೇಳೆ ಹೊಸಕೋಟೆ ಕಡೆಯಿಂದ ಗಾಂಜಾ ತಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಇದರಲ್ಲಿ ಮತ್ತೊಬ್ಬ ಆರೋಪಿ ದೇವನಹಳ್ಳಿ ಭಾಗದಿಂದ ತಂದಿರುವುದಾಗಿ ಹೇಳಿಕೆ ಕೊಟ್ಟಿರುವುದು ಪೊಲೀಸರಿಗೆ ಜಿಲ್ಲೆಯಲ್ಲಿ ಗಾಂಜಾ ಮಾರಾಟದ ದೊಡ್ಡಜಾಲ ಇರುವ ಬಗ್ಗೆ ಬಲವಾದ ಅನುಮಾನ ಮೂಡಿಸಿದೆ.
ನೆಲಮಂಗಲದಲ್ಲಿ ಬಂಧನ: ಗಾಂಜಾ ಮಾರಾಟ ಮಾಡುತ್ತಿದ್ದ ದಂಧೆಕೋರನೊಬ್ಬ ಅ.31ರಂದು ಮಾದನಾಯಕನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮದ ಜನಪ್ರಿಯ ಟೌನ್‌ಶಿಪ್ ನಿವಾಸಿ ಪಿ.ವಿ.ಶಿವಪ್ರಸಾದ್ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿ 300 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇವೆರಡು ಪ್ರಕರಣಗಳ ಬೆನ್ನತ್ತಿರುವ ಗ್ರಾಮಾಂತರ ಜಿಲ್ಲಾ ಪೊಲೀಸರು ಆರೋಪಿಗಳ ಮಾಹಿತಿಯ ಜಾಡು ಹಿಡಿದು ಕಾರ್ಯಾಚರಣೆಗೆ ಮುಂದಾಗಿದ್ದಾರೆ.