

ಶ್ರೀರಂಗಪಟ್ಟಣ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಹತ್ಯೆಗೊಳಗಾದ ಹಿಂದು ಪ್ರವಾಸಿಗರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮೇಣದ ಬತ್ತಿಯಲ್ಲಿ ಜ್ಯೋತಿ ಬೆಳಗಿಸಿ ಮೌನಾಚರಣೆ ಮಾಡಿದರು.
ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಬುಧವಾರ ಸಂಜೆ ರೈತನಾಯಕ ಕೆ.ಎಸ್.ನಂಜುಂಡೇಗೌಡ ಹಾಗೂ ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ನೇತೃತ್ವದಲ್ಲಿ ಜಮಾವಣೆಗೊಂಡ ಬಿಜೆಪಿ ಮಂಡಲದ ಕಾರ್ಯಕರ್ತರು ಉಗ್ರರಿಂದ ಹತರಾದ ಮೃತರ ಆತ್ಮಗಳಿಗೆ ಶಾಂತಿ ಕೋರಿ ಈ ದೃಷ್ಕೃತ್ಯಕ್ಕೆ ಖಂಡಿಸಿದರು.
ರೈತನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ದೇಶದಲ್ಲಿ ಉಗ್ರ ಕೃತ್ಯಗಳು ಈ ಘಟನೆಯಿಂದ ಅಂತ್ಯವಾಗಬೇಕಿದ್ದು, ಇನ್ಮುಂದೆ ಇಂತಹ ಕೃತ್ಯ ಮಾಡುವವರು, ಮಾಡಲು ಸಹಕಾರ ನೀಡುವವರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಕಠಿಣ ಪ್ರತ್ಯುತ್ತರದ ಕ್ರಮ ಕೈಗೊಂಡು ಸರ್ವಕಾಲಕ್ಕೂ ನೆನೆಯುವಂತೆ ಎಚ್ಚರಿಕೆಯ ಪಾಠ ನೀಡಬೇಕು. ಇಂತಹ ಸೂತಕದ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಕಾಶ್ಮೀರದಲ್ಲಿ 370ನೇ ವಿಧಿ ತೆರೆವು ಮಾಡಿದ್ದು ಪ್ರಮುಖ ಕಾರಣ ಎಂದಿರುವುದು ತೀರಾ ನಾಚೀಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವರನ್ನು ಆಯ್ಕೆ ಮಾಡಿದ ತಪ್ಪಿಗೆ ಕ್ಷೇತ್ರದ ಜನರು ಇಂತಹ ಮಾತು ಕೇಳುವ ಪರಿಸ್ಥಿತಿ ಎದುರಾಗಿದ್ದು, ಶಾಸಕರು ತಮ್ಮ ಹೇಳಿಕೆಗೆ ಕ್ಷೇತ್ರದ ಜನರೆದುರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಮಾತನಾಡಿ, ಕಾಶ್ಮೀರ ಭಾರತದ ಅಸ್ಮಿತೆ ವಿಚಾರವಾಗಿದ್ದು, ಭೂಲೋಕದ ಸ್ವರ್ಗ ಎನ್ನುವಂತಹ ಕಾಶ್ಮೀರದಲ್ಲಿ ಉಂಟಾಗಿದ್ದ ಅಶಾಂತಿ ತೊಡೆದು ಹಾಕಿ ಕೇಂದ್ರ ಸರ್ಕಾರ ಪ್ರವಾಸೋದ್ಯಮ ಮೂಲಕ ಅಭಿವೃದ್ದಿಪಡಿಸಲಾಗುತ್ತಿತ್ತು. ಆದರೆ ಪ್ರವಾಸಿಗರ ಅದರಲ್ಲೂ ಹಿಂದುಗಳ ಮೇಲೆ ಉಗ್ರರು ನಡೆಸಿದ ಈ ದುಷ್ಕೃತ್ಯಕ್ಕೆ ದೇಶವೇ ಮರುಕ ವ್ಯಕ್ತಪಡಿಸಿ ಖಂಡಿಸಿದೆ ಎಂದು ಹೇಳಿದರು.
ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಶಿವು, ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಮುಖಂಡರಾದ ಬಿ.ಸಿ.ಸಂತೋಷ್ ಕುಮಾರ್, ಕಂಠಿ ರಘು , ಲಕ್ಷ್ಮೀನಾರಾಯಣ್, ರಮೇಶ್ ಇತರರು ಇದ್ದರು.