

ರಾಣೆಬೆನ್ನೂರ: ಬರ್ತಡೇ ಕ್ಯಾಂಡಲ್ ಮಾಡುವ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮಾಲೀಕ ಸೇರಿ 7 ಜನ ಕಾರ್ಮಿಕರು ಸುಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿಯ ಮಾರುತಿ ನಗರದಲ್ಲಿ ಮಂಗಳವಾರ ನಡೆದಿದೆ.
ವ್ನಿೇಶ್ವರ ಸ್ಪಾರ್ಕ್ ಪ್ಯಾಕ್ಟರಿಯ ಮಾಲೀಕ ಶ್ರೀಕಾಂತ ಹಾಗೂ ಕಾರ್ಮಿಕರಾದ ಶಿವಲಿಂಗಯ್ಯ ಕಲ್ಮಠ, ಶಿಲ್ಪಾ, ಮಹೇಶ ಸಂಕನ, ಶಂಭುಲಿಂಗನಗೌಡ ದ್ಯಾವನಗೌಡ, ಮಂಗಳಾ ಬೆಂಕೇರಿ, ಗೀತಾ ವೆಂಕನವರ ಗಾಯಗೊಂಡವರು. ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಫ್ಯಾಕ್ಟರಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಕಾರ್ಮಿಕರು ಹೊರಬರಲು ಪ್ರಯತ್ನಿಸಿದರೂ ಬೆಂಕಿ ಹತ್ತಿಕೊಂಡು ಸುಟ್ಟು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ 2 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.