

ಚನ್ನರಾಯಪಟ್ಟಣ: ತಾಲೂಕು ಮಾಜಿ ಸೈನಿಕರ ಸಂಘ, ರೋಟರಿ ವಿಷನ್ ಮತ್ತು ಪಟ್ಟಣದ ಇಂಡಿಯನ್ ಕ್ರಿಕೆಟರ್ಸ್ ತಂಡದ ಸದಸ್ಯರು ಹಾಗೂ ಸಾರ್ವಜನಿಕರು ಪಟ್ಟಣದ ಕೆ.ಆರ್.ವೃತ್ತದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿಸವ ಆಚರಣೆ ಮಾಡಿದರು.
ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ದೇವರಾಜ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಪ್ರತಿ ಭಾರತೀಯನಿಗೆ ಹೆಮ್ಮೆಯ ತರುವ ದಿನ. ಯುದ್ಧದಲ್ಲಿ ದೇಶಕ್ಕಾಗಿ ಅಸಂಖ್ಯಾತ ಯೋಧರು ಪ್ರಾಣ ಚೆಲ್ಲಿದ್ದಾರೆ. ಇಂದು ಅವರನ್ನು ನಾವೆಲ್ಲ ಸ್ಮರಿಸಬೇಕು ಎಂದು ತಿಳಿಸಿದರು.
ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಜಿ.ಕೆ.ಪುಟ್ಟರಾಜ್ ಮಾತನಾಡಿ, ಕಾರ್ಗಿಲ್ ವಿಯೋತ್ಸವದ ಬಗ್ಗೆ ಯುವ ಸಮುದಾಯ ತಿಳಿಯುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. ವಿಜಯ ದಿವಸ ಅಂಗವಾಗಿ ನಡೆದ ಮೆರವಣಿಗೆ ಕೆ.ಆರ್.ವೃತ್ತದಿಂದ ಬಿ.ಎಂ.ರಸ್ತೆ ಮೂಲಕ ಸಾಗಿ, ಆಸ್ಪತ್ರೆ ವೃತ್ತದಿಂದ ಕೆ.ಆರ್.ವೃತ್ತಕ್ಕೆ ಆಗಮಿಸಿತು. ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಬಿ.ಕೆ.ವೆಂಕಟೇಶ್, ಕಾರ್ಯದರ್ಶಿ ದೇವೆಂದ್ರ, ಖಜಾಂಚಿ ಆಗಸ್ಟಿನ್, ರೋಟರಿ ಸಂಸ್ಥೆ ಅಧ್ಯಕ್ಷ ಬಿ.ವಿ.ವಿಜಯ್, ಕಾರ್ಯದರ್ಶಿ ಡಾ.ಕುಮುದಾ, ಇಂಡಿಯನ್ ಕ್ರಿಕೆಟರ್ಸ್ ತಂಡದ ನವೀನ್, ಜಾಂಟಿ ಸೇರಿ ಎಲ್ಲ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.