ವರಿಷ್ಠರು ನಿರ್ಧರಿಸುವ ಅಭ್ಯರ್ಥಿ ಪರ ಕಾರ್ಯ

1-hvr-09
Published on

ಹಾನಗಲ್ಲ: ಮಾಜಿ ಸಚಿವರು, ಪಕ್ಷದ ಹಿರಿಯ ಮುಖಂಡರಾದ ಮನೋಹರ ತಹಶೀಲ್ದಾರ್, ಪಕ್ಷದಲ್ಲಿನ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತಂದು ಪರಿಹರಿಸಿಕೊಳ್ಳುವ ಬದಲು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ತಾಲೂಕಿನ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ವರಿಷ್ಠರಿಗೆ ದೂರು ಸಲ್ಲಿಸಬೇಕಾಗುತ್ತದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಪಂ, ತಾಪಂ, ಪುರಸಭೆ ಚುನಾಯಿತ ಪ್ರತಿನಿಧಿಗಳು ಎಚ್ಚರಿಸಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಎಸ್. ಪಾಟೀಲ, ಪುಟ್ಟಪ್ಪ ನರೇಗಲ್ಲ, ತಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಖುರ್ಷಿದಅಹ್ಮದ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ ಪವಾಡಿ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಸದಸ್ಯರಾದ ಶಿವಬಸಪ್ಪ ಪೂಜಾರ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಯಾಸೀರಖಾನ್ ಪಠಾಣ, ದಾನಪ್ಪ ಗಂಟೇರ, ಯಲ್ಲಪ್ಪ ಕಿತ್ತೂರ, ರವೀಂದ್ರ ದೇಶಪಾಂಡೆ, ರಾಜು ಗುಡಿ, ರಾಜೇಂದ್ರ ರಡ್ಡೇರ, ಮಾರುತಿ ಪುರ್ಲಿ, ಕೆ.ಪಿ. ಭೋಸಲೆ, ವೀರಭದ್ರಗೌಡ ಪೊಲೀಸಪಾಟೀಲ ಇತರರು, ಮನೋಹರ ತಹಶೀಲ್ದಾರ್ ವಿರುದ್ಧ ಹರಿಹಾಯ್ದರು.

ತಹಶೀಲ್ದಾರ್ ಅವರ ವರ್ತನೆಯಿಂದ ಪಕ್ಷದ ಚುನಾಯಿತ ಪ್ರತಿನಿಧಿಗಳು, ನಿಷ್ಠಾವಂತ ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ. ಕಳೆದ 40 ವರ್ಷಗಳಿಂದ ಮನೋಹರ ತಹಶೀಲ್ದಾರ್ ಪರವಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ತಮಗೆ ನೋವುಂಟಾದರೆ ತಮ್ಮ ಅಳಲನ್ನು 4 ಗೋಡೆಗಳ ಮಧ್ಯೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷದ ಶಿಸ್ತು ಉಲ್ಲಂಘಿಸಿ ಗೊಂದಲ ಸೃಷ್ಟಿಸಿರುವುದು ಅವರ ಘನತೆಗೆ ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಕಳೆದ 40 ವರ್ಷಗಳಿಗಿಂತಲೂ ಈಗ ಜನಸಂಪರ್ಕ, ಜನಸ್ಪಂದನೆ ಹಾಗೂ ಸಂಘಟನೆ ಹೆಚ್ಚಾಗಿದೆ. ಕಾರ್ಯಕರ್ತರಿಗೆ ಸಾಧ್ಯವಾದಷ್ಟರ ಮಟ್ಟಿಗೆ ಆಡಳಿತ ಪಕ್ಷದವರ ದೌರ್ಜನ್ಯ ಹಾಗೂ ದಬ್ಬಾಳಿಕೆಗಳಾಗದಂತೆ ಸಮರ್ಥವಾಗಿ ತಡೆಹಿಡಿದಿದ್ದಾರೆ. ಹಾನಗಲ್ಲ ಕ್ಷೇತ್ರದಲ್ಲಿಯೂ ಪಕ್ಷದ ಹೈಕಮಾಂಡ್ ನಿರ್ಧರಿಸುವ ಅಭ್ಯರ್ಥಿ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ ಎಂದರು.

ಕಾರ್ಯಕರ್ತರ ಸಮಸ್ಯೆಗೆ ಸ್ಪಂದನೆ

2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ವಿಪ ಸದಸ್ಯ ಶ್ರೀನಿವಾಸ ಮಾನೆ ಅವರಿಗೆ ಹಾನಗಲ್ಲ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿತು. ಪಕ್ಷದ ತೀರ್ವನದಂತೆ ಎಲ್ಲ ಕಾರ್ಯಕರ್ತರು ಹುಮ್ಮಸ್ಸಿನಿಂದ ಚುನಾವಣೆಯನ್ನು ಎದುರಿಸಿದ್ದೇವೆ. ಅಲ್ಲದೆ, ಆ ಸಮಯದಲ್ಲಿ ಮಾನೆ ಅವರು, ‘ನಾನು ಗೆದ್ದರೂ, ಸೋತರೂ ತಾಲೂಕಿನಲ್ಲಿದ್ದುಕೊಂಡು, ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಸೇವೆಯನ್ನು ಮಾಡುತ್ತೇನೆ’ ಎಂಬ ಭರವಸೆ ನೀಡಿದ್ದರು. ಅದರಂತೆ ಕಳೆದ ಎರಡೂವರೆ ವರ್ಷಗಳಿಂದ ತಾಲೂಕಿನ ಜನರ ಹಾಗೂ ಕಾರ್ಯಕರ್ತರ ಮಧ್ಯೆಯಿದ್ದು ಸೇವೆ ಮಾಡುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ಕೂಡಲೆ, ತಮ್ಮ ವಿಧಾನ ಪರಿಷತ್ ಕ್ಷೇತ್ರ ವಿಶಾಲವಾಗಿದ್ದರೂ ಹಾನಗಲ್ಲ ತಾಲೂಕನ್ನು ನೋಡಲ್ ತಾಲೂಕನ್ನಾಗಿ ಆಯ್ಕೆ ಮಾಡಿಕೊಂಡು, ಕಚೇರಿ ತೆರೆದು, ಸಿಬ್ಬಂದಿ ನೇಮಿಸಿ, ಜನರ ಸಂಕಷ್ಟಗಳನ್ನು ಆಲಿಸುತ್ತ 24*7 ಸೇವೆ ಮಾಡುತ್ತಿದ್ದಾರೆ. ಪುರಸಭೆ, ಲೋಕಸಭೆ, ಪಶ್ಚಿಮ ಪದವೀಧರರ ವಿಪ ಚುನಾವಣೆ, ಗ್ರಾಪಂ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net