

ಸೊರಬ: ಗ್ರಾಪಂ ಚುನಾವಣೆ ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ಈ ನಿಟ್ಟಿನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ತೀರ್ವನವನ್ನು ಎಲ್ಲರೂ ಸ್ವಾಗತಿಸಬೇಕು ಎಂದು ಮಾಜಿ ಶಾಸಕ ಎಸ್.ಮಧುಬಂಗಾರಪ್ಪ ಹೇಳಿದರು.
ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ಮುಂದೆ ಇರುವ ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲಗಳಿಗೆ ಅವಕಾಶ ನೀಡದೆ, ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಭ್ಯರ್ಥಿಗಳ ಗೆಲುವಿಗೆ ಕಟಿಬದ್ಧರಾಗಿರಬೇಕು. ಜನರಲ್ಲಿ ವಿಶ್ವಾಸವುಳ್ಳ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು. ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಸ್ಥಳೀಯ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳುವುದು ಒಳಿತು. ನಂತರ ಮುಖಂಡರು ಅಂತಿಮ ನಿರ್ಧಾರ ಕೈಗೊಳ್ಳುವರು. ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.
ತಾಲೂಕಿನ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಎಸ್.ಬಂಗಾರಪ್ಪ ಅವರು ರೈತರಿಗೆ ಭೂಮಿ ನೀಡುವ ಕಾನೂನು ಜಾರಿಗೆ ತಂದರೆ, ಈಗಿನ ಶಾಸಕರು ಬಡ ರೈತರ ಭೂಮಿ ಕಸಿಯಲು ಮುಂದಾಗುತ್ತಿದ್ದಾರೆ. ರೈತರಿಗೆ ನೀಡಿದ ಹಕ್ಕುಪತ್ರ ವಜಾಗೊಳಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ತಂದೆ ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ. ಅವರ ಆದರ್ಶಗಳೇ ನನಗೆ ದಾರಿದೀಪವಾಗಿವೆ. ರೈತರ ವಿಷಯದಲ್ಲಿ ಅನ್ಯಾಯವಾದರೆ ಮತ್ತೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.