ದಿಗ್ಗಜರ ಮಧ್ಯೆ ಹೊಸಬರ ಕಾದಾಟ

Untitled
Published on

ಮಡಿಕೇರಿ:

ರಾಜಕಾರಣಕ್ಕೆ ಬರಬೇಕು, ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕು ಎನ್ನುವ ತುಡಿತ ಹೊಂದಿರುವವರು ಸಾಕಷ್ಟು ಜನ ಇರುತ್ತಾರೆ. ಆದರೆ ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳೇ ರಾಜಕೀಯಕ್ಕೆ ಇಳಿದು ಉನ್ನತ ಸ್ಥಾನಕ್ಕೆ ಏರುವುದನ್ನು ಕಾಣಬಹುದು. ಈ ಮಧ್ಯೆ ಕೊಡಗಿನಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇರದ ಇಬ್ಬರು ೪೦ ವರ್ಷದ ಒಳಗಿನವರು ಪಕ್ಷೇತರವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ’ಗೆಲುವು, ಸೋಲು ಆಮೇಲೆ…ನಮ್ಮ ಕನಸುಗಳು, ಚಿಂತನೆಗಳನ್ನು ಜನಸಾಮಾನ್ಯರ ಜೊತೆ ಹಂಚಿಕೊಳ್ಳಲು ಇದೊಂದು ಅವಕಾಶ’, ಎನ್ನುವುದು ಅವರುಗಳ ಅಭಿಪ್ರಾಯ.

’ಯುವಕರು ರಾಜಕೀಯಕ್ಕೆ ಬರಬೇಕು…’ ಸಭೆ ಸಮಾರಂಭಗಳ ಭಾಷಣಗಳಲ್ಲಿ ಆಗಾಗ್ಗೆ ರಾಜಕಾರಣಿಗಳಿಂದ ಇಂತಹದ್ದೊಂದು ಮಾತು ಕೇಳಿಬರುತ್ತಿದೆ. ಆದರೆ ಆಸಕ್ತಿ ಇರುವ ಯುವ ಜನತೆಗೆ ಇಂತಹ ರಾಜಕಾರಣಿಗಳು ಎಷ್ಟರ ಮಟ್ಟಿಗೆ ಅವಕಾಶ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ತಮ್ಮ ಕುಟುಂಬದ ಕುಡಿ, ಸಂಬಂಧಿಕರ ಮಕ್ಕಳನ್ನು ರಾಜಕೀಯದಲ್ಲಿ ಮುನ್ನೆಲೆಗೆ ತರುವ ನಾಯಕರೇ ತುಂಬಿರುವಾಗ ನೈಜ ರಾಜಕೀಯದ ತುಡಿತ ಇರುವ ಯುವಕರು ಈ ಕ್ಷೇತ್ರದ ಸಹವಾಸವೇ ಬೇಡ ಎಂದು ತೆರೆಮರೆಗೆ ಸರಿದುಬಿಡುತ್ತಾರೆ. ಕೋಟಿಗಟ್ಟಲೆ ಹಣ ಸುರಿಯದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿರುವುದು ಕೂಡ ಪ್ರತಿಭಾವಂತ ಯುವಕರು ರಾಜಕಾರಣದಿಂದ ದೂರ ಸರಿಯುವಂತೆ ಆಗಿದೆ.

ಈ ಮಧ್ಯೆ ಕೊಡಗಿನಲ್ಲಿ ಪಕ್ಷೇತರವಾಗಿ ಕಣಕ್ಕೆ ಇಳಿದಿರುವವರ ಪೈಕಿ ಇಬ್ಬರು ಗಮನ ಸೆಳೆಯುತ್ತಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ೪೦ ವರ್ಷದ ಪಿ.ಕೆ. ದರ್ಶನ್ ಶೌರಿ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ೩೦ ವರ್ಷದ ಶೃತಿ ಕೆ.ಪಿ. ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಆಕಾಂಕ್ಷೆಗಳನ್ನು ಹೊಂದಿದ್ದು ಘಟಾನುಘಟಿಗಳ ಎದುರು ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಆಸಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಕಾಲೂರು ಗ್ರಾಮದ ಶೃತಿ ಬಿ.ಎ. ಪದವೀಧರೆ. ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕು ಎನ್ನುವ ಸ್ವಂತ ಇಚ್ಛೆಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಇವರ ಈ ನಿರ್ಧಾರಕ್ಕೆ ಪತಿ ಸೇರಿದಂತೆ ಕುಟುಂಬಸ್ಥರು ಸಹಮತ ಸೂಚಿಸಿದ್ದಾರೆ. ಚುನಾವಣೆಯಲ್ಲಿ ಜತೆಗೆ ನಿಲ್ಲುವ ಭರವಸೆ ನೀಡಿದ್ದಾರೆ. ಸುತ್ತಮುತ್ತಲಿನ ಮನೆಯವರು, ಸ್ನೇಹಿತರೂ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅದರಲ್ಲೂ ಯುವಕರ ಬೆಂಬಲ ಉತ್ತಮವಾಗಿದೆ. ಯಾವುದೇ ರಾಜಕೀಯ ಹಿನ್ನೆಲೆ ಇರದಿದ್ದರೂ ಈ ಕ್ಷೇತ್ರದತ್ತ ಶೃತಿ ಆಸಕ್ತಿ ತೋರಿಸಿ ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ.

ಗೆಲುವು ಅಥವಾ ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಚುನಾವಣೆಯಲ್ಲಿ ಒಬ್ಬ ಸ್ಪರ್ಧಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವಕಾಶ ಸಿಕ್ಕಿದರೆ ರಾಜಕೀಯದಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮೊದಲ ನಮ್ಮ ಸುತ್ತಲಿನ ಅಭಿವೃದ್ಧಿಗೆ ಆದ್ಯತೆ ಕೊಟ್ಟು ನಂತರ ವಿಶಾಲ ಕ್ಷೇತ್ರದ ಕಡೆಗೆ ಗಮನ ಕೊಡುವುದಾಗಿ ಹೇಳುತ್ತಾರೆ. ಕೊಡಗಿನ ಸಂಸ್ಕೃತಿ ಉಳಿಯಬೇಕು ಎನ್ನುವ ಕಳಕಳಿ ಇರುವ ಇವರಿಗೆ ರಾಜಕೀಯದಲ್ಲಿ ಹಲವರು ಸ್ಫೂರ್ತಿ ಆಗಿದ್ದಾರೆ.

ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದ ಪಿ.ಕೆ. ದರ್ಶನ್ ಶೌರಿ ಮಹತ್ವಾಕಾಂಕ್ಷೆ ಇರುವ ಯುವಕ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತು ಆಮ್ ಆದ್ಮಿ ಪಕ್ಷದ ಮಾದರಿಯಲ್ಲಿ ಕರ್ನಾಟಕದಲ್ಲೂ ಒಂದು ಪಕ್ಷ ಹುಟ್ಟುಹಾಕಬೇಕು ಎಂದು ಕನಸು ಕಂಡಿದ್ದರು. ಇದಕ್ಕಾಗಿ ೧೦ ವರ್ಷಗಳ ಹಿಂದೆ ನ್ಯಾ. ಸಂತೋಷ್ ಹೆಗ್ಡೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಅವರು ದರ್ಶನ್ ಚಿಂತನೆಗಳಿಗೆಲ್ಲ ಸಹಮತ ಸೂಚಿಸಿದರಾದರೂ ತಮ್ಮ ವಯಸ್ಸಿನ ಕಾರಣ ನೀಡಿ ನಾಯಕತ್ವ ವಹಿಸಿಕೊಳ್ಳಲು ನಿರಾಕರಿಸಿದ್ದರು. ನಂತರ ಅವಕಾಶಕ್ಕಾಗಿ ಕಾಯುತ್ತಿದ್ದ ದರ್ಶನ್ ಈಗ ವಿರಾಜಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.

ದರ್ಶನ್ ತಂದೆ ಹಿಂದೊಮ್ಮೆ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ಹಿನ್ನೆಲೆ ಹೊರತುಪಡಿಸಿದರೆ ಇವರೂ ಈ ಕ್ಷೇತ್ರಕ್ಕೆ ಹೊಸಬ. ಆರಂಭದಲ್ಲಿ ಪತ್ನಿಯಿಂದ ವಿರೋಧ ವ್ಯಕ್ತವಾದರೂ ಈಗ ಪತಿಯ ಆಸೆಗೆ ಜತೆಯಾಗಿದ್ದಾರೆ. ತಮ್ಮ ಊರಿನಿಂದ ಪ್ರಚಾರ ಕಾರ್ಯ ಶುರು ಮಾಡಿದ್ದು, ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಮತದಾನಕ್ಕೆ ಇನ್ನೂ ಕೆಲವು ದಿನ ಉಳಿದಿದೆ. ಅಷ್ಟರ ಒಳಗೆ ತನ್ನ ವಿಚಾರಧಾರೆಗಳ ಮೂಲಕ ಮತದಾರರ ಮನ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಹೊಸ ತಲೆಮಾರಿನ ಇಬ್ಬರಲ್ಲೂ ಸಾಕಷ್ಟು ಉತ್ಸಾಹ ಕಂಡುಬರುತ್ತಿದೆ. ತಮ್ಮ ಗುರಿ ಸೇರಲು ಸಾಕಷ್ಟು ಶ್ರಮದ ಅಗತ್ಯ ಇದೆ ಎನ್ನುವುದು ಈ ಇಬ್ಬರಿಗೂ ಗೊತ್ತು. ಆದರೆ ಒಂದಿಷ್ಟು ಮಂದಿಗೆ ತಮ್ಮ ಪರಿಚಯ ಆಗುತ್ತದೆ. ವಿವಿಧ ಮನೋಭಾವದ, ಬೇರೆ ಬೇರೆ ವೃತ್ತಿಗಳ ಜನರ ಮಧ್ಯೆ ಬೆರೆಯುವ ಅವಕಾಶ ಸಿಗುತ್ತದೆ. ಪ್ರಪಂಚವನ್ನು ಈ ರೀತಿಯಿಂದಲೂ ಅರ್ಥ ಮಾಡಿಕೊಂಡು ನೋಡಬಹುದು. ಭವಿಷ್ಯದಲ್ಲಿ ರಾಜಕಾರಣದಲ್ಲಿ ಉತ್ತಮ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಈ ಚುನಾವಣೆಯನ್ನು ಎದುರಿಸಲು ಮುಂದಾಗಿದ್ದಾರೆ.

ಯುವ ಜನಾಂಗಕ್ಕೆ ಒಂದು ಸ್ಫೂರ್ತಿ ನೀಡಬೇಕು ಎನ್ನುವ ಉದ್ದೇಶಕ್ಕೆ ಚುನಾವಣೆಗೆ ನಿಂತಿದ್ದೇನೆ. ಚುನಾವಣೆಗೆ ನಿಲ್ಲುವವರೇ ಆಗಾಗ್ಗೆ ನಿಲ್ಲುತ್ತಿದ್ದಾರೆ. ಹೊಸಬರು ಯಾರೂ ಕಂಡು ಬರುತ್ತಿಲ್ಲ. ಮಡಿಕೇರಿಯನ್ನು ಸಾಕಷ್ಟು ಅಭಿವೃದ್ಧಿ ಮಾಡುವ ಅವಕಾಶಗಳಿದ್ದರೂ ಇದನ್ನು ಬಳಸಿಕೊಂಡಿಲ್ಲ. ಮೂಲಭೂತ ಸೌಲಭ್ಯಗಳನ್ನೇ ಸರಿಯಾಗಿ ಕೊಟ್ಟಿಲ್ಲ. ಹಾಗೆಂದು ನಾನು ಗೆದ್ದು ಎಲ್ಲವನ್ನೂ ಮಾಡುತ್ತೇನೆ ಎಂದಲ್ಲ. ಸಿಗುವ ಅವಕಾಶ ಬಳಸಿಕೊಳ್ಳಬೇಕಲ್ವಾ? ಕುಟುಂಬ ಮತ್ತು ನಮ್ಮ ಸುತ್ತಮುತ್ತಲಿನ ಜನರಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ತಮ್ಮ ಸಮಸ್ಯೆ ಕೇಳುವ, ಕೆಲಸಗಳನ್ನು ಮಾಡಿಸಿಕೊಡುವ ಯುವ ಮುಖದ ನಿರೀಕ್ಷೆಯಲ್ಲಿ ಇದ್ದವರಿಗೆ ನನ್ನ ಸ್ಪರ್ಧೆ ಖುಷಿ ಕೊಟ್ಟಿದೆ.
ಶೃತಿ ಕೆ.ಪಿ. ಪಕ್ಷೇತರ ಅಭ್ಯರ್ಥಿ, ಮಡಿಕೇರಿ ವಿಧಾನಸಭಾ ಕ್ಷೇತ್ರ

ಒಬ್ಬ ಪ್ರಧಾನಿ ತನ್ನ ಸುತ್ತಲೂ ಶಶ್ತ್ರಸಜ್ಜಿತ ಬೆಂಗಾವಲು ಪಡೆ ಜತೆ ಸಂಚರಿಸುತ್ತಾರೆ ಎಂದರೆ ನನ್ನ ದೇಶಕ್ಕೆ ಈಗಲೂ ಸ್ವಾತಂತ್ರ್ಯ ಬಂದಿದೆಯಾ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಇಂತಹ ಪರಿಸ್ಥಿತಿ ಹೋಗಬೇಕು. ಯಾವುದೇ ಆತಂಕಗಳಿಲ್ಲದೆ ಪ್ರತಿಯೊಬ್ಬರೂ ತಿರುಗಾಡಬೇಕು ಎನ್ನುವುದು ನನ್ನ ಕನಸು. ಸಂತೋಷ್ ಹೆಗ್ಡೆ ನನಗೆ ಆದರ್ಶ. ಎಲ್ಲಾ ಸಾಧಕ ರಾಜಕಾರಣಿಗಳ ಒಳ್ಳೆಯ ಗುಣಗಳೇ ನನಗೆ ಸ್ಫೂರ್ತಿ. ಒಮ್ಮೆಲೇ ಬದಲಾವಣೆ ಆಗುವುದಿಲ್ಲ ಎನ್ನುವುದು ನನಗೂ ಗೊತ್ತು. ಸಮಾಜದಲ್ಲಿ, ರಾಜಕಾರಣದಲ್ಲಿ ಆಗುವ ಬದಲಾವಣೆಗಳಲ್ಲಿ ಒಂದಿಷ್ಟು ಪಾಲು ನನ್ನದಿದ್ದರೆ ಅದೇ ನನಗೆ ಸಾರ್ಥಕತೆ. ಒಳ್ಳೆಯ ನಾಯಕನಾಗಿ ರಾಜಕಾರಣದಲ್ಲಿ ಮುಂದುವರಿಯುವ ಆಕಾಂಕ್ಷೆ ಇದೆ.
ಪಿ.ಕೆ. ದರ್ಶನ್ ಶೌರಿ, ಪಕ್ಷೇತರ ಅಭ್ಯರ್ಥಿ, ವಿರಾಜಪೇಟೆ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net