ಕೋಮಾ ಸ್ಥಿತಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ: ಬಾಗಿಲು ಮುಚ್ಚಲು ವ್ಯವಸ್ಥಿತ ಷಡ್ಯಂತ್ರವೇ?

27_12_Mdy_05(Cancer Hospital Story)
Published on

ಮಂಡ್ಯ: ಲಕ್ಷಾಂತರ ರೋಗಿಗಳಿಗೆ ಆಶ್ರಯವಾಗಬೇಕಿದ್ದ ಮಂಡ್ಯ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ, ಜನಪ್ರತಿನಿಧಿಗಳ ದುರಾಡಳಿತ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೋಮಾ ಸ್ಥಿತಿ ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆ ಕುರಿತು ತೋರುತ್ತಿರುವ ನಿರ್ಲಕ್ಷೃದಿಂದಾಗಿ ಬಾಗಿಲು ಮುಚ್ಚಿಸಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆಯೇ ಎನ್ನುವ ಅನುಮಾನ ಮೂಡಿಸಿದೆ.

ಜಿಲ್ಲೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಹಿರಿಯ ರಾಜಕಾರಣಿಗಳಾಗಿದ್ದ ಡಾ.ಜಿ.ಮಾದೇಗೌಡ, ಕೆ.ಸಿಂಗಾರಿಗೌಡ, ಡಾ.ಕೆ.ಮರೀಗೌಡ ಸೇರಿದಂತೆ ಹಲವರ ಪ್ರಯತ್ನದ ಫಲವಾಗಿ ಜಿಲ್ಲಾ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.5ರಂದು ಮಂಡ್ಯದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ಪ್ರಾರಂಭಿಸಲಾಯಿತು. ಬೆಂಗಳೂರಿಗೆ ಮಂಡ್ಯ ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಅಲೆದಾಡಿಸುವುದನ್ನು ತಪ್ಪಿಸಲು ಇಂತಹದೊಂದು ಮಹತ್ವದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಯಿತು.

ಹಲವು ವರ್ಷ ಆಸ್ಪತ್ರೆಯಲ್ಲಿ ಉತ್ತಮ ಸೇವೆಯೂ ಸಿಗುತ್ತಿತ್ತು. ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತಿ.ನರಸೀಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಆಸ್ಪತ್ರೆಗೆ ಕಾಯಕಲ್ಪ ಸಿಗದೆ ಅವಸಾನದತ್ತ ಸಾಗಿದ್ದು, ಅವಶ್ಯಕ ಯೋಜನೆಯೊಂದು ಹಳ್ಳ ಹಿಡಿಯುವಂತಾಗಿದೆ.

ಜಿಲ್ಲೆಯ ಗಣ್ಯರೆಲ್ಲರೂ ಸೇರಿದ ಕಾರಣಕ್ಕೆ ಅಂದು ದಾನಿಗಳು ಧಾರಾಳವಾಗಿ ದೇಣಿಗೆ ನೀಡಿದ್ದರು. ಜಿಲ್ಲಾ ಪಂಚಾಯಿತಿ 41 ಲಕ್ಷ ರೂ., ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರು 15 ಲಕ್ಷ ರೂ., ಮೈಶುಗರ್ ಮತ್ತು ಕಬ್ಬು ಬೆಳೆಗಾರರು 9 ಲಕ್ಷ ರೂ., ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರು 2.23 ಲಕ್ಷ ರೂ., ಜಿಲ್ಲಾ ಸರ್ಕಾರಿ ನೌಕರರು 10.75 ಲಕ್ಷ ರೂ., ನಗರಸಭೆ 2 ಲಕ್ಷ ರೂ., ಎಂಡಿಸಿಸಿ ಬ್ಯಾಂಕ್ ನೌಕರರು 1 ಲಕ್ಷ ರೂ., ಟಿಂಬರ್ ಅಸೋಸಿಯೇಷನ್‌ನಿಂದ 35 ಸಾವಿರ ರೂ., ಮದ್ದೂರು ಅಂಗನವಾಡಿ ಕಾರ್ಯಕರ್ತೆಯರು 42 ಸಾವಿರ ರೂ., ಚಿಕ್ಕಮಗಳೂರು ಇಂಜಿನಿಯರಿಂಗ್ ಕಾಲೇಜು ನೌಕರರು 18 ಸಾವಿರ ರೂ., ಎಪಿಎಂಸಿಎಸ್‌ನಿಂದ 57 ಸಾವಿರ ರೂ. ನೀಡಿದ್ದರು. ಇದನ್ನು ಬಳಸಿಕೊಂಡು ಕೇಂದ್ರ ಪ್ರಾರಂಭಿಸಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ರಮ್ಯಾ ಅವರು ಸಂಸದೆಯಾಗಿದ್ದ ವೇಳೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಯಂತ್ರೋಪಕರಣದೊಂದಿಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಯಿತು. ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಭಾಗವಾಗಿದ್ದ ಮಂಡ್ಯ ಕ್ಯಾನ್ಸರ್ ಆಸ್ಪತ್ರೆಗೆ 45 ಕೋಟಿ ರೂ. ನೀಡಲು ನಿರ್ಧರಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಕೇಂದ್ರದಿಂದ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ 12 ಕೋಟಿ ರೂ. ಬಿಡುಗಡೆಯಾಯಿತು. ಆದರೆ ಈ ಹಣದಿಂದ ಕಟ್ಟಡ ನಿರ್ಮಾಣ ಮಾಡದೆ ಸಿವಿಲ್ ಕಾಮಗಾರಿ ಮಾಡಿದ ಪರಿಣಾಮ 5.65 ಕೋಟಿ ರೂ. ಹೆಚ್ಚುವರಿಯಾಯಿತು. ಈ ವೇಳೆ ಸಮರ್ಪಕ ದಾಖಲೆ ನೀಡದ ಕಾರಣಕ್ಕೆ ಅನುದಾನಕ್ಕೆ ಸರ್ಕಾರ ತಡೆ ನೀಡಿತು. ಅಂದಿನಿಂದಲೇ ಆಸ್ಪತ್ರೆಗೆ ಕಂಟಕ ಎದುರಾಯಿತು.

ಕೊನೆಯ ಮೊಳೆ ಹೊಡೆಯಲು ಷಡ್ಯಂತ್ರ?: ಸಾವಿರಾರು ಕ್ಯಾನ್ಸರ್ ರೋಗಿಗಳಿಗೆ ವರವಾಗಿದ್ದ ಆಸ್ಪತ್ರೆಯ ಬಾಗಿಲು ಮುಚ್ಚಿ ಕೊನೆಯ ಮೊಳೆ ಹೊಡೆಯಲು ಕೆಲ ಅಧಿಕಾರಿಗಳು ಷಡ್ಯಂತ್ರ ಮಾಡಿದ್ದಾರೆನ್ನುವ ಮಾತು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಅಂಗಳದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣವೂ ಇದೆ. ಕಟ್ಟಡವಾಗದಿದ್ದರೂ ಒಂದಷ್ಟು ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಅದು ಕೂಡ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.

ಕ್ಯಾನ್ಸರ್ ರೋಗಿಗಳು ಬಂದರೆ ಬೆಂಗಳೂರು ಮತ್ತು ಮೈಸೂರಿಗೆ ರವಾನಿಸುವ ಕೆಟ್ಟ ಚಾಳಿ ನಡೆಯುತ್ತಿದೆ. ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕನಿಷ್ಠ ಮಟ್ಟದಲ್ಲಿಯೂ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸ್ಪಂದನೆ ಸಿಗದಿರುವುದು ದುರಂತ. ಪ್ರತಿ ವಾರವೂ ರೋಗಕ್ಕೆ ಚಿಕಿತ್ಸೆ ಪಡೆಯಲು ಬೆಂಗಳೂರು, ಮೈಸೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಜನರು ಚಿಕಿತ್ಸೆಗೆ ಹಣ ಕೊಡುವುದರ ಜತೆಗೆ, ದೂರದ ಪ್ರಯಾಣವನ್ನೂ ಮಾಡಬೇಕಿದೆ. ಆರ್ಥಿಕವಾಗಿ ಹಿಂದುಳಿದವರ ಪಾಡು ಹೇಳತೀರದು. ಇಂದಿಗೂ ಪ್ರತಿದಿನ 25 ರಿಂದ 30 ರೋಗಿಗಳು ಚಿಕಿತ್ಸೆಗೆಂದು ಮಿಮ್ಸ್ ಬಾಗಿಲು ತಟ್ಟುತ್ತಿದ್ದಾರೆ.

ಕಟ್ಟಡವಾಯ್ತು ಗೋದಾಮು: ಕ್ಯಾನ್ಸರ್ ಆಸ್ಪತ್ರೆಗೆಂದು ಮೀಸಲಾಗಿದ್ದ ಕಟ್ಟಡವನ್ನು ಮಕ್ಕಳ ವಿಭಾಗಕ್ಕೆ ಬಳಸಿಕೊಳ್ಳಲಾಗುತ್ತಿದೆ. ಚಿಕಿತ್ಸೆಯೇ ನಡೆಯದಿರುವುದರಿಂದ ಹೊಸ ಕಟ್ಟಡವನ್ನು ಗೋದಾಮಿನ ರೀತಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಿಮ್ಸ್‌ಗೆ ಬರುವ ಔಷಧ ಸೇರಿದಂತೆ ಸಾಮಗ್ರಿ ತುಂಬಿಕೊಳ್ಳಲು ಕಟ್ಟಡವನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ರೂ. ತೆರಿಗೆ ಹಣ ಈ ರೀತಿ ಪೋಲಾಗುತ್ತಿರುವುದು ದುರಂತ.

ಬದ್ಧತೆ ತೋರದ ಜನಪ್ರತಿನಿಧಿಗಳು: ವೇದಿಕೆ ಮೇಲೆ ಅಬ್ಬರದ ಭಾಷಣ, ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದೇವೆ ಎನ್ನುವ ಜನಪ್ರತಿನಿಧಿಗಳು ಕ್ಯಾನ್ಸರ್ ಆಸ್ಪತ್ರೆ ವಿಷಯದಲ್ಲಿ ಬದ್ಧತೆ ತೋರದಿರುವುದು ಬೇಸರದ ಸಂಗತಿ. ಸಚಿವರು, ಶಾಸಕರು ಮನಸ್ಸು ಮಾಡಿದರೆ ಬಗೆಹರಿಸುವುದು ದೊಡ್ಡ ವಿಷಯವಲ್ಲ. ಆದರೆ ಅದಕ್ಕೂ ಕಾಳಜಿ ಬೇಕಿದೆ.

ಸದ್ಯಕ್ಕೆ ಬೆಂಗಳೂರು, ಮೈಸೂರು ಅಲೆದಾಡುತ್ತಿರುವ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ವಿಕಿರಣ ತಜ್ಞರು, ಸಂರಕ್ಷಣಾಧಿಕಾರಿ, ಭೌತವಿಜ್ಞಾನಿಯ ನಿಯೋಜನೆ ಆಗಬೇಕಿದೆ. ಇದರಿಂದ ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿರುವವರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ, ಅವಶ್ಯವಿರುವ ಸೌಲಭ್ಯ ಒದಗಿಸುವ ಮೂಲಕ ಅಂದು ಜಿಲ್ಲೆಯ ಹಿರಿಯರು ತೋರಿದ ಬದ್ಧತೆಯನ್ನು ಇಂದಿನವರು ಮೆರೆಯಬೇಕಿದೆ.

ಸಿಎಂಗೆ ಪತ್ರ ಬರೆದಿದ್ದ ಎಂಎಲ್‌ಸಿ: ಮಂಡ್ಯದ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು, ಇಲ್ಲವೇ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಸುಸಜ್ಜಿತ ವೈದ್ಯಕೀಯ ಉಪಕರಣಗಳು ಹಾಗೂ ಔಷಧಗಳನ್ನು ತುರ್ತು ಒದಗಿಸುವಂತೆ ಒತ್ತಾಯಿಸಿ ಮೇ ತಿಂಗಳಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಪತ್ರ ಬರೆದಿದ್ದರು.

ಸಿಬ್ಬಂದಿ ಮತ್ತು ವೈದ್ಯರ ಕೊರತೆಯಿಂದಾಗಿ ಕ್ಯಾನ್ಸರ್ ರೋಗಿಗಳು ಸರಿಯಾದ ಚಿಕಿತ್ಸೆ ದೊರೆಯದೆ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ವಹಿಸಬೇಕು. ಈ ಹಿಂದೆ 12 ಕೋಟಿ ರೂ. ಅನುದಾನ ನೀಡಿದ್ದು ಬಿಟ್ಟರೆ ಉಳಿದ ಯಾವುದೇ ರೀತಿಯ ಕೆಲಸ ನಡೆದಿಲ್ಲ. ಈ ಅನುದಾನದಲ್ಲಿ ಕಟ್ಟಡದ ನಿರ್ಮಾಣ ಹೊರತುಪಡಿಸಿ ಉಳಿದ ಕೆಲಸಗಳು ಆಗಿಲ್ಲ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅವಶ್ಯವಿರುವ 5.65 ಕೋಟಿ ರೂ.ಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ ಇದಕ್ಕೂ ಯಾವ ಸ್ಪಂದನೆಯೂ ಸಿಕ್ಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net