

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ರಕ್ತ ಕ್ಯಾನ್ಸರ್ ಮತ್ತು ಬ್ಲಡ್ ಸ್ಟೆಮ್ ಕೋಶ ದಾನ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ನೋಂದಣಿ ಮಂಗಳವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ, ಡಿ.ಕೆ.ಎಂ.ಎಸ್.-ಬಿ.ಎಂ.ಎಸ್.ಟಿ. ಫೌಂಡೇಷನ್ ಇಂಡಿಯಾದ ಅಸೋಸಿಯೇಟ್ ರೋಹಿತ್ ರಾಜೀವ್ ಮಾತನಾಡಿ, ಸಂಸ್ಥೆ ಮುಖ್ಯ ಉದ್ದೇಶ ಮತ್ತು ಗುರಿಗಳ ಕುರಿತು ತಿಳಿಸಿದರು. ರಕ್ತ ಕ್ಯಾನ್ಸರ್ ಮತ್ತು ಬ್ಲಡ್ ಸ್ಟೆಮ್ ಕೋಶದ ದಾನ ಕುರಿತ ಮಾಹಿತಿ ನೀಡಿದರು.
ಪ್ರಪಂಚದಲ್ಲಿ ಎಷ್ಟೋ ಮಂದಿ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಕ್ಯಾನ್ಸರ್‌ನ ಚಿಕಿತ್ಸೆಯಲ್ಲಿ ಕಿಮೋಥೆರಪಿ ಮತ್ತು ರೇಡಿಯೋಥೆರಪಿ ಫಲಿಸದೆ ಇದ್ದಾಗ ಕೊನೆಯ ಆಯ್ಕೆ ಬ್ಲಡ್ ಸ್ಟೆಮ್ ಕೋಶದ ಕಸಿ. ಆ ಉದ್ದೇಶದಿಂದ ಸ್ಥಾಪನೆಗೊಂಡ ಸಂಸ್ಥೆಯೇ ಡಿ.ಕೆ.ಎಂ.ಎಸ್.- ಬಿ.ಎಂ.ಎಸ್.ಟಿ.ತಲಸೇಮಿಯಾ ಸಮಸ್ಯೆ ಭಾರತದಲ್ಲಿ ಅದೆಷ್ಟೋ ಇದೆ. ಆದರೆ ಈ ಕುರಿತು ಭಾರತೀಯರಿಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ. ಪ್ರತಿ 5 ನಿಮಿಷಕ್ಕೆ ಒಬ್ಬ ವ್ಯಕ್ತಿ ಬ್ಲಡ್ ಕ್ಯಾನ್ಸರ್ ನಿಂದ ಸಾಯುತ್ತಿದ್ದಾನೆ. 10 ಲಕ್ಷ ಜನರಲ್ಲಿ ಓರ್ವನ ಬ್ಲಡ್ ಸ್ಟೆಮ್ ಕೋಶ ಇನ್ನೊಬ್ಬನಿಗೆ ಹೊಂದಾಣಿಕೆಯಾಗುತ್ತದೆ. ಪ್ರಪಂಚದ 7 ಕಡೆಗಳಲ್ಲಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, 12 ಲಕ್ಷಕ್ಕಿಂತ ಅಧಿಕ ಜನರ ಬ್ಲಡ್ ಸ್ಟೆಮ್ ಕೋಶದ ದಾನ ಮಾಡಲು ನೋಂದಣಿಯಾಗಿದೆ. ಹತ್ತು ಸಾವಿರಕ್ಕಿಂತಲೂ ಹೆಚ್ಚು ದಾನಿಗಳಿಗೆ ದಾನ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ವತಿಯಿಂದ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿ ಮತ್ತು ಡಿ ಕೆಎಂಎಸ್ ಬಿಎಂಎಸ್‌ಟಿ ಫೌಂಡೇಷನ್ ಇಂಡಿಯಾ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬ್ಲಡ್ ಸ್ಟೆಮ್ ಕೋಶ ದಾನದ ನೋಂದಣಿ ನಡೆಸಲಾಯಿತು. ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್.ಮತ್ತು ಪ್ರೊ.ದೀಪಾ ಆರ್.ಪಿ. ಹಾಗೂ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿ ಸದಸ್ಯೆ ಹರಿಣಿ ಉಪಸ್ಥಿತರಿದ್ದರು. ಸ್ವಯಂಸೇವಕಿಯರಾದ ಮಾನ್ಯಾ ಕೆ.ಆರ್. ಸ್ವಾಗತಿಸಿ, ಸನುಷ ಪಿಂಟೋ ವಂದಿಸಿ, ಪ್ರೀತಿ ಆರ್.ನಿರೂಪಿಸಿದರು.