

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಹಿಳೆಯರಲ್ಲಿ ಕಾಡುವ ಗರ್ಭಕಂಠ ಕ್ಯಾನ್ಸರ್ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡುವ ಸರ್ಕಾರದ ಯೋಜನೆ ಅನುಷ್ಟಾನಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಗರ್ಭಕಂಠದ ಕ್ಯಾನ್ಸರ್ ಲಸಿಕೆ (ಸೆರ್ವಿಕಲ್ ವಾಕ್ಸಿನ್) ವಿತರಿಸುವ ಸಂಬಂಧ ಆರೋಗ್ಯ ಇಲಾಖೆಯಿಂದ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಇದೆಯಾದರೂ ಇದುವರೆಗೆ ಅಂಕಿತ ಬಿದ್ದಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ 11 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಎರಡು ಡೋಸ್ ಲಸಿಕೆ ನೀಡಬೇಕೆಂಬ ಪ್ರಸ್ತಾವನೆಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿಲ್ಲ. ದೇಶದಲ್ಲಿ 1 ನಿಮಿಷಕ್ಕೆ 4 ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ ಹಾಗೆಯೇ 8 ನಿಮಿಷಕ್ಕೆ ಒಬ್ಬ ಕ್ಯಾನ್ಸರ್ ರೋಗಿ ಮೃತಪಡುತ್ತಿದ್ದಾರೆ ಎಂದು ಇತ್ತೀಚಿಗೆ ಕಿದ್ವಾಯಿ ಸ್ಮಾರಕ ಸಂಸ್ಥೆ ವೈದ್ಯ ಡಾ.ಕೆ.ಎನ್.ಲೋಕೇಶ್ ಕಳವಳ ವ್ಯಕ್ತಪಡಿಸಿದ್ದರು. ಪ್ರತಿ ವರ್ಷ ಸರ್ಕಾರ ವಿಶ್ವ ಕ್ಯಾನ್ಸರ್ ದಿನ ಆಚರಿಸುತ್ತದೆ ಆದರೆ ಲಸಿಕೆ ಕೊಡಮಾಡುವ ವಿಷಯದಲ್ಲಿ ಮೀನಮೇಷ ಎಣಿಸುತ್ತಿದೆ.
ಗರ್ಭಕಂಠದ ಕ್ಯಾನ್ಸರ್ ಲಸಿಕೆ ಅಥವಾ ಎಚ್‌ಪಿವಿ ಲಸಿಕೆ, ಲೈಂಗಿಕ ಸಂಪರ್ಕದ ಮೂಲಕ ಹರಡುವ ವೈರಸ್‌ಗಳ ಒಂದು ವಿಶಿಷ್ಟ ಗುಂಪಾದ ಹ್ಯೂಮನ್ ಪ್ಯಾಪಿಲೋಮ ವೈರಸ್ ವಿರುದ್ಧ ರಕ್ಷಿಸುತ್ತದೆ. ಇದು ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ 11 ಅಥವಾ 12 ವಯಸ್ಸಿನಲ್ಲಿ ಈ ಲಸಿಕೆ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಕಳೆದ ಸಾಲಿನಲ್ಲಿಯೇ ಲಸಿಕೆ ಬಿಡುಗಡೆ ಬಗ್ಗೆ ಸುದ್ದಿಯಾಗಿತ್ತಾದರೂ ಇದುವರೆಗೆ ಟೇಕಾಪ್ ಆಗಿಲ್ಲ.
ಖಾಸಗಿಯಲ್ಲಿ ದುಬಾರಿ: ಕ್ಯಾನ್ಸರ್ ಬಗ್ಗೆ ಸಾಕಷ್ಟು ಜನರಲ್ಲಿ ಅರಿವಿಲ್ಲ ಅದರಲ್ಲೂ ಚಿಕ್ಕವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿಯ ಲಸಿಕೆ ಹಾಕಿಸುವ ಬಗ್ಗೆ ಗ್ರಾಮೀಣ ಜನರಲ್ಲಿ ಮಾಹಿತಿ ಕೊರತೆ ಇದೆ. ಖಾಸಗಿಯಲ್ಲಿ ಈ ಲಸಿಕೆ ದುಬಾರಿಯಾಗಲಿದೆ. ಎರಡು ಡೋಸ್ ನೀಡಬೇಕಿದ್ದು ಏಳರಿಂದ ಎಂಟು ಸಾವಿರ ರೂಪಾಯಿ ಆಗಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುವ ಸಂಬಂಧ ಚಿಂತನೆ ನಡಸಿತ್ತು ಆದರೆ ಇದುವರೆಗೆ ಯೋಜನೆ ಅನುಷ್ಟಾನ ದೂರದ ಮಾತಾಗಿಯೇ ಉಳಿದಿದೆ.
ಡೋಸ್ ಪಡೆಯುವುದು ಹೇಗೆ? ಪ್ರಸ್ತುತ 11 ಅಥವಾ 12 ವರ್ಷ ವಯಸ್ಸಿನ ಮಕ್ಕಳಿಗೆ 6 ರಿಂದ 12 ತಿಂಗಳ ಅಂತರದಲ್ಲಿ ಎರಡು ಗರ್ಭಕಂಠದ ಕ್ಯಾನ್ಸರ್ ಲಸಿಕೆ ಚುಚ್ಚುಮದ್ದನ್ನು ಪಡೆಯಬೇಕೆಂದು ಶಿಫಾರಸು ಮಾಡುತ್ತವೆ. ಜತೆಗೆ ಲಸಿಕೆಯನ್ನು 9 ವರ್ಷ ವಯಸ್ಸಿನಲ್ಲೇ ಮತ್ತು 45 ವರ್ಷ ವಯಸ್ಸಿನ ನಂತರವೂ ನೀಡಬಹುದು. 15 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಮೊದಲ ಡೋಸ್ ಪಡೆಯುವ ವ್ಯಕ್ತಿಗಳು 6 ತಿಂಗಳ ಅವಧಿಯಲ್ಲಿ ಮೂರು ಡೋಸ್ ಲಸಿಕೆ ಪಡೆಯಬಹುದು ಎನ್ನಲಾಗಿದ್ದರೂ ವೈದ್ಯರ ಸಲಹೆ ಪಡೆಯುವುದು ಕಡ್ಡಾಯವಾಗಿದೆ.
ಜಿಲ್ಲೆಯಲ್ಲಿ ಸ್ಕ್ರೀನಿಂಗ್: ಜಿಲ್ಲಾ ಆರೋಗ್ಯ ಇಲಾಖೆ ಕ್ಯಾನ್ಸರ್ ರೋಗಿಗಳ ಪತ್ತೆ ಹಾಗೂ ಚಿಕಿತ್ಸೆಗಾಗಿ ಪ್ರತೀ ವರ್ಷ ಸ್ಕ್ರೀನಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ರಕ್ತದೊತ್ತಡ, ಮಧುಮೇಹ ಪರೀಕ್ಷೆಯಂತೆಯೇ ಕ್ಯಾನ್ಸರ್ ರೋಗ ತಪಾಸಣೆ ನಡೆಸುತ್ತದೆ. ಮುಖ್ಯವಾಗಿ ಬಾಯಿ ಕ್ಯಾನ್ಸರ್ ಪರೀಕ್ಷೆ ನಡೆಯುತ್ತದೆ ಬಾಯಿಯಲ್ಲಿ ಯಾವುದಾದರೂ ಹುಣ್ಣು ಕಂಡುಬಂದರೆ ಅದರ ಬಗ್ಗೆ ಹೆಚ್ಚಿನ ತಪಾಸಣೆಗೊಳಪಡಿಸಲಾಗುತ್ತದೆ ಹಾಗೇಯೇ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದ್ದು, ಸ್ತನಗಳಲ್ಲಿ ಗಂಟುಗಳ ಮಾದರಿ ಕಂಡುಬಂದರೆ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತದೆ ಕ್ಯಾನ್ಸರ್ ಲಕ್ಷಣಗಳು ಕಂಡುಬಂದರೆ ತಕ್ಷಣ ಕಿದ್ವಾಯಿ ಅಥವಾ ಹತ್ತಿರದ ಕ್ಯಾನ್ಸರ್ ಆಸ್ಪತ್ರೆಗಳಿಗೆ ರವಾನಿಸಲಾಗುತ್ತದೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತಿದೆ, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಸ್ಕೀನಿಂಗ್ ಮಾಡುತ್ತಾರೆ. ಸಾಮಾನ್ಯವಾಗಿ ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚು ಕಂಡುಬರುತ್ತವೆ, ಗರ್ಭಕಂಠ ಕ್ಯಾನ್ಸರ್ ತಡೆಗೆ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡುವ ಪ್ರಸ್ತಾವನೆ ಇದೆ.
ಹೇಮಾವತಿ ಜಿಲ್ಲಾ ಸಂಯೋಜಕಿ, ಆರೋಗ್ಯ ಇಲಾಖೆ
-----------
ಕ್ಯಾನ್ಸರ್ ಬರದಂತೆ ತಡೆಯಲು ಸಾಧ್ಯವಿಲ್ಲ ಆದರೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡರೆ ತಡೆಯಲು ಸಾಧ್ಯ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು, ಸಾಮಾನ್ಯವಾಗಿ ಪುರುಷರಿಗೆ ಶ್ವಾಸಕೋಶದ ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕ್ಯಾನ್ಸರ್ ಭಯಾನಯವಾದ ರೋಗವಲ್ಲ ಈ ಬಗ್ಗೆ ಅನಗತ್ಯ ಭಯಬೇಡ.
ಡಾ.ಕೆ.ಎನ್.ಲೋಕೇಶ್, ಕಿದ್ವಾಯಿ ಸ್ಮಾರಕ ಸಂಸ್ಥೆ ವೈದ್ಯ