

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯ ಹೆಚ್ಚುತ್ತಿದ್ದು, ಅದಕ್ಕೆ ಅನುಗಣವಾಗಿ ತಜ್ಞ ಕ್ಯಾನ್ಸರ್ ಚಿಕಿತ್ಸಕರ ಅವಶ್ಯಕತೆ ಇದೆ ಎಂದು ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ನ (ಯುಐಸಿಸಿ) ಮಾಜಿ ಅಧ್ಯಕ್ಷ, ಖ್ಯಾತ ಗ್ರಂಥಿ ಶಾಸ್ತ್ರಜ್ಞ ಡಾ. ಅನಿಲ ಡಿಕ್ರೂಜ್ ಹೇಳಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಇಂಡಿಯನ್ ಅಸೋಸಿಯೇಶನ್ ಆಫ್ ಸರ್ಜಿಕಲ್ ಅಂಕಾಲಜಿ (ಐಎಎಸ್ಒ) ಮತ್ತು ಹುಬ್ಬಳ್ಳಿ ಅಂಕಾಲಜಿ ಗ್ರುಪ್ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರ ಮಟ್ಟದ ಕ್ಯಾನ್ಸರ್ ಶಸ್ತ್ರಚಿಕಿತ್ಸಕರ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಚಾಲಿತ ಚಿಕಿತ್ಸಾ ವ್ಯವಸ್ಥೆಯು ಇಂದು ಹೆಚ್ಚು ಆಕರ್ಷಣೀಯವಾಗುತ್ತಿವೆ. ತಂತ್ರಜ್ಞಾನವನ್ನು ಹೆಚ್ಚೆಚ್ಚು ಅವಲಂಬಿಸಿದಂತೆ ವೈದ್ಯಕೀಯ ವೆಚ್ಚವು ಏರಿಕೆಯಾಗುತ್ತಿವೆ. ಆರೋಗ್ಯ ಸೇವೆಯು ಎಲ್ಲರಿಗೂ ದಕ್ಕುವ ರೀತಿಯಲ್ಲಿ ಇರಬೇಕು. ಸುಮಾರು 40 ವರ್ಷಗಳ ಹಿಂದೆ ಈ ಭಾಗದಲ್ಲಿ ಡಾ. ಆರ್.ಬಿ. ಪಾಟೀಲ ಅವರು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ ಕೆಲಸ ಮಾಡಿದ್ದು ಶ್ಲಾಘನೀಯವಾದುದು. ಅವರ ಮಾರ್ಗದರ್ಶನದ ಫಲವಾಗಿ ಇಂದು ಈ ಕ್ಷೇತ್ರದಲ್ಲಿ ಸಾಕಷ್ಟು ತಜ್ಞ ವೈದ್ಯರು ಹುಟ್ಟಿಕೊಂಡಿದ್ದಾರೆ ಎಂದರು.
ಐಎಎಸ್ಒ ಅಧ್ಯಕ್ಷ ಡಾ. ಎಸ್.ವಿ.ಎಸ್. ದಿಯೋ, ಸಮಾವೇಶದ ಸಂಘಟನಾ ಸಮಿತಿಯ ಮುಖ್ಯ ಪೋಷಕ ಡಾ. ಬಿ.ಆರ್. ಪಾಟೀಲ, ಐಎಎಸ್ಒ ಕಾರ್ಯದರ್ಶಿ ಡಾ. ರುದ್ರಪ್ರಸಾದ ಆಚಾರ್ಯ, ನಿಯೋಜಿತ ಅಧ್ಯಕ್ಷ ಡಾ. ಶರದ ದೇಸಾಯಿ, ಉಪಾಧ್ಯಕ್ಷ ಡಾ. ಟಿ. ಸುಬ್ರಮಣ್ಯೇಶ್ವರ ರಾವ್ ಮಾತನಾಡಿದರು. ಸಮಾವೇಶ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಸಂಜೀವ ಕುಲಗೋಡ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಸಂತೋಷ ಚಿಕ್ಕರಡ್ಡಿ ವಂದಿಸಿದರು. ಡಾ. ಶಶಿಧರ ಕೆ. ಇದ್ದರು.
ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಕುರಿತು ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಸಮಾವೇಶ ಆಯೋಜಿಸಲಾಗಿದ್ದು, ದೇಶದ ವಿವಿಧೆಡೆಯ 400ಕ್ಕೂ ಹೆಚ್ಚು ಕ್ಯಾನ್ಸರ್ ತಜ್ಞರು ಪಾಲ್ಗೊಂಡಿದ್ದಾರೆ.