ಕ್ಯಾನ್ಸರ್ ತಜ್ಞ ಡಾ.ಗುರುಪ್ರಸಾದ್ ಭಟ್ ‘ಐರನ್ ಮೆನ್’

iran
Published on

ಮಂಗಳೂರು: ಮಂಗಳೂರಿನ ಕ್ಯಾನ್ಸರ್ ತಜ್ಞ ಡಾ.ಗುರುಪ್ರಸಾದ್ ಭಟ್ ಅವರು ಇಟಲಿಯಲ್ಲಿ ನಡೆದ ‘ಟ್ರಯತ್ಲಾನ್’ನಲ್ಲಿ ಭಾಗವಹಿಸಿ ಪದಕ ಗೆಲ್ಲುವ ಮೂಲಕ ‘ಐರನ್ ಮೆನ್’ ಆಗಿ ಹೊರ ಹೊಮ್ಮಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಐರನ್ ಮೆನ್’ ಆಗಿರುವುದು ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ. ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರಿನ ಜನ ಸಾಧನೆ ಮಾಡುವಂತೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಈ ಕಠಿಣ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದಿದ್ದೇನೆ. ಮಂಗಳೂರಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯತ್ತ ಆಕರ್ಷಿತರಾಗಬೇಕಿದೆ ಎಂದರು.

ಅಡ್ರಿಯಾಟಿಕ್ ಸಮುದ್ರದಲ್ಲಿ 3.8 ಕಿ.ಮೀ. ಈಜು ಮತ್ತು 108 ಕಿ.ಮೀ. ಸೈಕ್ಲಿಂಗ್ ಹಾಗೂ 42 ಕಿ.ಮೀ. ಓಟ ಒಳಗೊಂಡಿತ್ತು. 16 ಗಂಟೆಯಲ್ಲಿ ಈ ಎಲ್ಲವನ್ನೂ ಯಶಸ್ವಿಯಾಗಿ ಪೂರ್ತಿಗೊಳಿಸಿದ್ದೇನೆ. 3.8 ಕಿ.ಮೀ ಈಜನ್ನು 1 ಗಂಟೆ 25 ನಿಮಿಷದಲ್ಲಿ, 180 ಕಿ.ಮೀ. ಸೈಕ್ಲಿಂಗನ್ನು 6 ಗಂಟೆ 55 ನಿಮಿಷದಲ್ಲಿ ಹಾಗೂ 42.2 ಕಿ.ಮೀ. ಓಟವನ್ನು 5 ಗಂಟೆ 10 ನಿಮಿಷದಲ್ಲಿ ತಲುಪಿದ್ದೇನೆ. ಇದನ್ನು ಜಗತ್ತಿನ ಅತ್ಯಂತ ಕಠಿಣ ಏಕದಿನ ಕ್ರೀಡಾಕೂಟವೆಂದು ಪರಿಗಣಿಸಲಾಗಿದ್ದು, ಇದರಲ್ಲಿ ಒಟ್ಟು 2,439 ಮಂದಿ ಭಾಗವಹಿಸಿದ್ದರು ಎಂದರು.

ಕಠಿಣ ಪರಿಶ್ರಮ: ಈ ಸ್ಪರ್ಧೆಗೆ ಸಿದ್ಧರಾಗಲು 12 ತಿಂಗಳ ಕಠಿಣ ಪರಿಶ್ರಮ ನಡೆಸಿದ್ದೇನೆ. ಕೋಚ್ ಚೈತನ್ಯ ಅವರ ಮೂಲಕ ವಾರಕ್ಕೆ 12ರಿಂದ 15 ಗಂಟೆಗಳ ತರಬೇತಿಯನ್ನು ಪಡೆದಿದ್ದೇನೆ. ಇದರಲ್ಲಿ ವಾರದಲ್ಲಿ 3 ದಿನ ಈಜು, ಶನಿವಾರ ದೀರ್ಘ ಓಟ, ಭಾನುವಾರ 6 ಗಂಟೆಗಳ ಕಾಲ ಸೈಕ್ಲಿಂಗ್ ಒಳಗೊಂಡಿತು ಎಂದರು.

ತರಬೇತುದಾರರಾದ ಮನೀಶ್, ಸಂಕೇತ್ ಹಾಗೂ ಮುಬಿನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net