ಕ್ಯಾನ್ಸರ್ ಕಾಯಿಲೆಗೆ ಸಕಾಲಿಕ ಚಿಕಿತ್ಸೆ ಅಗತ್ಯ

17Ckd2
Published on

ಚಿಕ್ಕೋಡಿ: ಕ್ಯಾನ್ಸರ್ ಕುರಿತು ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಅನೇಕ ಸಾವು ಸಂಭವಿಸುತ್ತಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಗುಣಪಡಿಸಬಹುದು ಎಂದು ಚಂದರಗಿ ಕ್ರೀಡಾ ಶಾಲೆ ನಿರ್ದೇಶಕ ಮಹೇಶ ಭಾತೆ ಹೇಳಿದರು.

ಸಮೀಪದ ಕರೋಶಿ ಗ್ರಾಮದಲ್ಲಿ ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಮತ್ತು ಆಧುನಿಕ ಜೀವನಶೈಲಿ ಪರಿಣಾಮ ಕುರಿತು ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಯಾನ್ಸರ್ ಸಾಮಾನ್ಯವಾಗಿ 40ರಿಂದ 70 ವರ್ಷದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಕ್ಯಾನ್ಸರ್ ಸಂಬಂಧಿತ ಲಕ್ಷಣಗಳು ಕಾಣಿಸಿಕೊಂಡರೆ, ವೈದ್ಯರ ಸಲಹೆ ಪಡೆದು ಅಗತ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ದೂರದೃಷ್ಟಿಯಿಂದ ಚಿಕ್ಕೋಡಿಯಲ್ಲಿ ಆಯುರ್ವೇದ ಕಾಲೇಜ್ ಪ್ರಾರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ಕೆಎಲ್‌ಇ ಆಯುರ್ವೇದ ಕಾಲೇಜ್ ಪ್ರಾಚಾರ್ಯ ಡಾ.ಕಿರಣ ಮುತ್ನಾಳಿ ಮಾತನಾಡಿ, ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಲೂ ಕ್ಯಾನ್ಸರ್ ಹೆಚ್ಚಳವಾಗುತ್ತಿದೆ. ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂದರು.

ಗ್ರಾಪಂ ಅಧ್ಯಕ್ಷ ಪಂಚಾಕ್ಷರಿ ಹಳಿಜೋಳಿ, ಕೆಎಲ್‌ಇ ಆಯುರ್ವೇದ ಕಾಲೇಜಿನ ಉಪನ್ಯಾಸಕ ಡಾ.ಹೊನವಾಡ. ಡಾ.ಬಿ.ಬಿ.ದೇಸಾಯಿ, ಮಹಾಂತೇಶ ಗುಡ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net