ತಕ್ಷಣ ಕ್ಯಾನ್ಸರ್ ಆಸ್ಪತ್ರೆ ಮರು ಆರಂಭಿಸಿ: ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯಕಾರ್ಯದರ್ಶಿಗೆ ಕನ್ನಡ ಸೇನೆ ಕರ್ನಾಟಕದಿಂದ ಮನವಿ

Manavi)
Published on

ಮಂಡ್ಯ: ನಗರದಲ್ಲಿ ಸ್ಥಗಿತಗೊಂಡಿರುವ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಯನ್ನು ಪುನಾರಂಭಿಸಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದಿಂದ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯಕಾರ್ಯದರ್ಶಿ ನವೀನ್‌ರಾಜ್‌ಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿನಲ್ಲಿ ಭೇಟಿ ಮಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಹಾಗೂ ಉಪಾಧ್ಯಕ್ಷ ಮಹಾಂತಪ್ಪ, ತಕ್ಷಣ ರಾಜ್ಯ ಸರ್ಕಾರ ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ತಕ್ಷಣ ಆಸ್ಪತ್ರೆ ಪ್ರಾರಂಭಿಸಬೇಕು. ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಹಲವು ದಿಗ್ಗಜರ ಪ್ರಯತ್ನದಿಂದ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.3 ರಂದು ಕ್ಯಾನ್ಸರ್ ಕೇಂದ್ರ ಆರಂಭವಾಯಿತು. ಹಲವು ವರ್ಷ ರೋಗಿಗಳಿಗೆ ಆಸ್ಪತ್ರೆಯಲ್ಲಿ ಉತ್ತಮ ಸೇವೆಯೂ ಸಿಗುತ್ತಿತ್ತು. ಆದರೆ ಕಳೆದೆರೆಡು ವರ್ಷದಿಂದ ಆಸ್ಪತ್ರೆಗೆ ಕಾಯಕಲ್ಪ ಸಿಗದೆ ದುಸ್ಥಿತಿಯತ್ತ ಸಾಗಿರುವುದು ರೋಗಿಗಳ ಸಂಕಟವನ್ನು ಹೆಚ್ಚು ಮಾಡಿದೆ ಎಂದಿದ್ದಾರೆ.

ರಮ್ಯಾ ಅವರು ಸಂಸದೆಯಾಗಿದ್ದ ವೇಳೆ ಕ್ಯಾನ್ಸರ್ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಯಂತ್ರೋಪಕರಣಗಳೊಂದಿಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಯಿತು. ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿದ್ದು, ಬೆಂಗಳೂರು-ಮೈಸೂರು ಆಸ್ಪತ್ರೆಗಳಿಗೆ ರವಾನಿಸುವ ಕೆಟ್ಟ ಚಾಳಿ ನಡೆಯುತ್ತಿದೆ. ಆದರೆ ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕನಿಷ್ಟ ಮಟ್ಟದಲ್ಲಿಯೂ ಜನಪ್ರತಿನಿಧಿಗಳು ಅಧಿಕಾರಿಗಳಿಂದ ಸ್ಪಂದನೆ ಸಿಗದೆ ಇರುವುದು ದುರಂತ. ಆದ್ದರಿಂದ ತ್ವರಿತವಾಗಿ ಆಸ್ಪತ್ರೆ ಪ್ರಾರಂಭಿಸಲು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net