

ಮಂಡ್ಯ: ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಗರ್ಭಾಶಯ ಹಾಗೂ ಸ್ತನ ಕ್ಯಾನ್ಸರ್ ರೋಗವನ್ನು ಪ್ರಾಥಮಿಕ ಹಂತದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಗುಣಪಡಿಸಲು ಸಾಧ್ಯವಾಗುತ್ತದೆ. ನಮ್ಮ ಆರೋಗ್ಯದಲ್ಲಿ ಸಣ್ಣದಾಗಿ ಸಮಸ್ಯೆ ಕಾಣಿಸಿದಾಗ ಬಳಿಕ ಹೆಚ್ಚಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಹೇಳಿದರು.
ನಗರದ ಹೊರವಲಯದ ಶ್ರೀನಿವಾಸ್‌ಪುರ ಗೇಟ್‌ನ ಆರ್‌ವಿಎಸ್ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ದಿನ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಿ ಸುಸ್ತು, ನಡೆಯಲು ಆಗದಿರುವುದು ಇಂತಹ ಲಕ್ಷಣಗಳು ಕಂಡು ಬರುತ್ತವೆ. ನಮ್ಮ ದೇಹದಲ್ಲಿ ಗಂಟುಗಳು ಬಂದಾಗ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡಲ್ಲಿ ಮುಂದೆ ಆಗಬಹುದಾದ ದೊಡ್ಡ ಅಪಾಯವನ್ನು ತಪ್ಪಿಸಿಕೊಳ್ಳಬಹುದು. ಎಲ್ಲರೂ ಜಾಗರೂಕರಾಗಿ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಮೆರಿಕಾದ ವೈದ್ಯೆ ಡಾ.ಮಲೀಸಾ ಮಿಸ್ಕೆಲ್ ಮಾತನಾಡಿ, ನಾಲ್ಕು ದಿನ ನಡೆಯುವ ಉಚಿತ ತಪಾಸಣೆಯನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಿ. ನಮ್ಮ ಎನ್‌ಜಿಒ ಸಂಸ್ಥೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಉಚಿತ ಶಸ್ತ್ರ ಚಿಕಿತ್ಸೆ ನಡೆಸಿ ಗುಣಪಡಿಸಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ನುರಿತ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮಂಡ್ಯ ಜಿಲ್ಲೆಯ ಜನ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಮನ್‌ಮುಲ್ ನಿರ್ದೇಶಕಿ ರೂಪಾ, ಡಾ.ಸೋಮಶೇಖರ್, ಡಾ.ಪ್ರಭಾವತಿ, ಡಾ.ಮೀರಾ ಪ್ರಸಾದ್, ಡಾ.ಭಗವಾನ್, ಡಾ.ಪೌಲಿ ಧಂದ ಇತರರಿದ್ದರು.