ಸೆ.11ರಿಂದ 14ರವರೆಗೆ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ: ಸ್ತ್ರೀರೋಗ ತಜ್ಞೆ ಡಾ.ಬಿ.ಎನ್.ಪ್ರಭಾವತಿ ಮಾಹಿತಿ

1 (1)
Published on

ಮಂಡ್ಯ: ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೆ.11ರಿಂದ 14ರವರೆಗೆ ನಗರದ ಹೊರವಲಯದ ಶ್ರೀನಿವಾಸಪುರ ಬಳಿಯ ಆರ್‌ವಿಎಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ಬಿ.ಎನ್.ಪ್ರಭಾವತಿ ಹಾಗೂ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಪ್ರಾಂಶುಪಾಲ ಡಾ.ಭಗವಾನ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಒಕ್ಕಲಿಗರ ಸಂಘ, ಅಮೆರಿಕಾದ ಪಿಐಎನ್‌ಸಿಸಿ ಹಾಗೂ ಬೆಂಗಳೂರಿನ ಪೂರ್ಣಸುಧಾ ಕ್ಯಾನ್ಸರ್ ಫೌಂಡೇಷನ್(ಪಿಎಸ್‌ಸಿಎಫ್) ಸಹಯೋಗದಲ್ಲಿ ಶಿಬಿರ ಆಯೋಜಿಸಿದೆ. ಅಮೆರಿಕಾದ ಆರು ಜನ ನುರಿತ ವೈದ್ಯರು ತಪಾಸಣೆ ಮಾಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮಹಿಳೆಯರಲ್ಲಿ ಮಾರಣಾಂತಿಕ ಗರ್ಭಾಶಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಕಂಡುಬರುತ್ತಿವೆ. ಮುಂದುವರೆದ ವೈದ್ಯಕೀಯ ತಂತ್ರಜ್ಞಾನದಿಂದ ಇವೆರಡೂ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದರೆ ರೋಗಿಗಳನ್ನು ಕಾಯಿಲೆಯಿಂದ ಸಂಪೂರ್ಣ ಗುಣಪಡಿಸಬಹುದು. ಪರಿಣಿತ ಮಹಿಳಾ ತಜ್ಞ ವೈದ್ಯರಿಂದ ಮಹಿಳೆಯರು ಪರೀಕ್ಷೆ ಮಾಡಿಸಿಕೊಂಡು, ಅವಶ್ಯವಿದ್ದಲ್ಲಿ ಸುಲಭ ವಿಧಾನದಲ್ಲಿ ಬೆಂಗಳೂರಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ವಿವರಿಸಿದರು.

ಶಿಬಿರದಲ್ಲಿ ಉಚಿತವಾಗಿ ಮ್ಯಾಮೊಗ್ರಫಿ, ಎಚ್‌ಪಿವಿ ವೈರಸ್ ಸ್ಕ್ರೀನಿಂಗ್ ಹಾಗೂ ವಿಐಎಎ ಪರೀಕ್ಷೆಗಳನ್ನು ಮಾಡಲಾಗುವುದು. ಬೆಂಗಳೂರಿನ ಪೂರ್ಣಸುಧಾ ಕ್ಯಾನ್ಸರ್ ಫೌಂಡೇಷನ್‌ನ(ಪಿಎಸ್‌ಸಿಎಫ್) ಡಾ.ಜಯಂತಿ ಸೈಮನ್, ಪ್ರತಿಮಾ ಶಂಕರ್ ಮ್ಯಾಮೊಗ್ರಫಿ ಪರೀಕ್ಷೆ ಮಾಡಲಿದ್ದಾರೆ. ಆಶಾ ಕಾರ್ಯಕರ್ತೆಯರನ್ನು ಶಿಬಿರದಲ್ಲಿ ಒಳಗೊಂಡಿಸಿಕೊಂಡಿದ್ದು, ತಪಾಸಣೆಗೆ ಬರುವ ಮಹಿಳೆಯರು ಅವರನ್ನು ಅಥವಾ ಸ್ವಯಂ ಪ್ರೇರಿತರಾಗಿ ಆಗಮಿಸಬಹುದು. ತಪಾಸಣೆಗೆ ಬರುವವರಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಮಹಿಳೆಯರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಲಿದರು.

ವೈದ್ಯರಾದ ಡಾ.ಚಂಪಕಮಾಲಿನಿ, ಡಾ.ಜಿ.ವಿ.ಮೀರಾ, ಡಾ.ಮಂಜುಳಾ ಕೃಷ್ಣಪ್ಪ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ಎಂ.ಸಿ.ಸೋಮಶೇಖರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net