

ಬೇಲೂರು : ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಸ್ವಂತ ಹಣದಲ್ಲಿ ಕ್ಯಾನ್ಸರ್ ರೋಗಿಗಳ ಸಂಬಂಧಿಕರಿಗೆ ಸೋಮವಾರ ಆಹಾರದ ಕಿಟ್‌ಗಳನ್ನು ವಿತರಿಸಿ ಕ್ಯಾನ್ಸರ್ ಜಾಗೃತಿ ದಿನ ಆಚರಿಸಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಕಾಣುತ್ತಿದ್ದೇವೆ. ಇದಕ್ಕೆ ಪ್ರಮುಖವಾಗಿ ಜನರ ಜೀವನಶೈಲಿ ಹಾಗೂ ಆಹಾರದ ವ್ಯತ್ಯಾಸ ಕಾರಣವಾಗುತ್ತಿದೆ. ಆದ್ದರಿಂದ ಕ್ಯಾನ್ಸರ್ ರೋಗಿಗಳು ಪ್ರಥಮ ಮತ್ತು ದ್ವಿತೀಯ ಹಂತದಲ್ಲೇ ತಜ್ಞ ವೈದ್ಯರಲ್ಲಿ ತೋರಿಸಿದರೆ ಬಹುತೇಕ ಗುಣವಾಗುವುದಕ್ಕೆ ಸಾಧ್ಯವಿದೆ. ರೋಗಿಗಳು ಯಾವುದೇ ಭಯಪಡದೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗಿಗಳು ಹೆಚ್ಚಾಗಿ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳಬಹುದಾಗಿದೆ ಎಂದರು.
ಇದೇ ಸಂದರ್ಭ ರೋಗಿಗಳಿಗೆ ಆಹಾರದ ಕಿಟ್ ಮತ್ತು ಅವರಿಗೆ ಅಗತ್ಯವಿದ್ದ ಪರಿಕರಗಳನ್ನು ವಿತರಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ಸೇರಿದಂತೆ ಎನ್‌ಜಿಒ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.